HEALTH TIPS

ವಾಯು ಮಾಲಿನ್ಯ: ದಿಲ್ಲಿಯಲ್ಲಿ ಶಾಲೆಗಳ ಹೊರಾಂಗಣ ಚಟುವಟಿಕೆಗಳಿಗೆ ನಿಷೇಧ

ನವದೆಹಲಿ: ದೆಹಲಿಯಲ್ಲಿ ವಾಯು ಮಾಲಿನ್ಯ ವಿಷಮಿಸುತ್ತಿರುವ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿನ ಶಾಲೆಗಳ ಹೊರಾಂಗಣ ಚಟುವಟಿಕೆಗಳಿಗೆ ನಿಷೇಧ ಹೇರಲಾಗಿದೆ.

ದೆಹಲಿಯಲ್ಲಿನ ವಾಯುಮಾಲಿನ್ಯ ಕಳೆದ ಒಂದು ವಾರದಲ್ಲಿ ಮತ್ತಷ್ಟು ಹದಗೆಟ್ಟಿರುವುದರಿಂದ ಸಾರ್ವಜನಿಕರ ಆಕ್ರೋಶ ತೀವ್ರಗೊಂಡಿದ್ದು, ಸುಪ್ರೀಂ ಕೋರ್ಟ್ ಹಾಗೂ ದಿಲ್ಲಿ ಹೈಕೋರ್ಟ್ ಕೂಡಾ ಈ ವಿಷಯುಕ್ತ ಗಾಳಿಯ ತೀವ್ರ ಸಂತ್ರಸ್ತರಾದ ಶಾಲಾ ಮಕ್ಕಳೆಡೆಗೆ ತಮ್ಮ ಗಮನ ಹರಿಸಿವೆ.

ಈ ನಡೆಯನ್ನು ಹಲವಾರು ತಜ್ಞರು ಸ್ವಾಗತಿಸಿದ್ದಾರೆ.

ಗುರುವಾರ ಅರ್ಜಿಯೊಂದರ ವಿಚಾರಣೆ ನಡೆಸಿದ ದಿಲ್ಲಿ ಹೈಕೋರ್ಟ್ ನ ನ್ಯಾ. ಸಚಿನ್ ದತ್ತ, ಇಂತಹ ಅತ್ಯಂತ ಮಾಲಿನ್ಯಕಾರ ತಿಂಗಳುಗಳಲ್ಲೂ ದಿಲ್ಲಿ ಸರಕಾರ ಹೊರಾಂಗಣ ಕ್ರೀಡೆಗಳನ್ನು ಆಯೋಜಿಸುತ್ತಿರುವ ಕ್ರಮವನ್ನು ಪ್ರಶ್ನಿಸಿದರು. "ನವೆಂಬರ್ ನಿಂದ ಜನವರಿ ತಿಂಗಳವರೆಗೆ ಮಕ್ಕಳು ಹೊರಾಂಗಣ ಕ್ರೀಡೆಗಳಲ್ಲಿ ಪಾಲ್ಗೊಳ್ಳಬಾರದು" ಎಂದು ಅವರು ತಾಕೀತು ಮಾಡಿದರು. ಪ್ರಾಧಿಕಾರಗಳು ಶಾಲಾ ಮಕ್ಕಳ ಆರೋಗ್ಯವನ್ನು ರಕ್ಷಿಸಲು ವಿಫಲವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಅಪಾಯಕಾರಿ ತಿಂಗಳುಗಳಲ್ಲಿ ಕ್ರೀಡಾ ವೇಳಾಪಟ್ಟಿಯನ್ನು ಪರಿಷ್ಕರಿಸಲೇಬೇಕು ಎಂದು ಒತ್ತಿ ಹೇಳಿದರು.

ವಾಯು ಗುಣಮಟ್ಟವು ಅತ್ಯಂತ ಕಳಪೆ ಮಟ್ಟಕ್ಕೆ ಇಳಿಕೆಯಾಗುತ್ತಿದ್ದರೂ, ಈ ತಿಂಗಳಲ್ಲಿ ಸಾಲುಸಾಲು ಹೊರಾಂಗಣ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಈ ಕ್ರೀಡಾ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ತಯಾರಿಸುತ್ತದೆ ಎಂದು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದರು. ಅಲ್ಲದೆ, ಶ್ವಾಸಕೋಶ ತಜ್ಞರು ಹಂಚಿಕೊಂಡಿರುವ ಸೂಕ್ಷ್ಮ ಕಣಗಳ ಮಾಲಿನ್ಯದಿಂದ ಮಕ್ಕಳ ಶ್ವಾಸಕೋಶಕ್ಕೆ ಆಗುತ್ತಿರುವ ದುಷ್ಪರಿಣಾಮಗಳ ಚಿತ್ರಗಳನ್ನೂ ಅವರು ನ್ಯಾಯಾಲಯದ ಮುಂದೆ ಸಲ್ಲಿಸಿದರು.

ದಿಲ್ಲಿಯಲ್ಲಿ ಹದಗೆಡುತ್ತಿರುವ ವಾಯು ಮಾಲಿನ್ಯದ ಕುರಿತು ಹೈಕೋರ್ಟ್ ಗಿಂತ ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಎಲ್ಲ ಶಾಲಾ ಕ್ರೀಡಾಕೂಟಗಳನ್ನು ಸ್ವಚ್ಛ ತಿಂಗಳುಗಳಿಗೆ ವರ್ಗಾಯಿಸುವಂತೆ ತಕ್ಷಣವೇ ಶಾಲೆಗಳಿಗೆ ನಿರ್ದೇಶನ ನೀಡುವಂತೆ ವಾಯು ಗುಣಮಟ್ಟ ನಿರ್ವಹಣಾ ಆಯೋಗಕ್ಕೆ ಸೂಚಿಸಿತು.

ದಿಲ್ಲಿಯ ವಾಯು ಗುಣಮಟ್ಟ ಸೂಚ್ಯಂಕವು ಗಂಭೀರ ಮಟ್ಟಕ್ಕೆ ಕುಸಿದಿರುವ ಬೆನ್ನಿಗೇ ನ್ಯಾಯಾಲಯಗಳಿಂದ ಈ ನಿರ್ದೇಶನ ಹೊರ ಬಿದ್ದಿದೆ. ದಿಲ್ಲಿಯಲ್ಲಿನ ವಾಯು ಗುಣಮಟ್ಟ ತೀರಾ ವಿಷಮಿಸಿರುವುದರಿಂದ, ಆರೋಗ್ಯವಂತ ವಯಸ್ಕರಿಗೂ ಮನೆಯೊಳಗೆ ಇರುವಂತೆ ಸಲಹೆ ನೀಡಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries