ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಲು ಸಲ್ಲಿಸಲಾದ ನಾಮಪತ್ರಗಳ ಪರಿಶೀಲನೆ ನ. 22ರಂದು ಬೆಳಗ್ಗೆ 10ಕ್ಕೆಪ್ರಾಮರಭವಾಗಲಿದೆ. ಸಂಬಂಧಪಟ್ಟ ಚುನಾವಣಾಧಿಕಾರಿಗಳು ನಾಮಪತ್ರಗಳ ಪರಿಶೀಲನೆ ನಡೆಸಲಿದ್ದು, ನಾಮಪತ್ರಗಳ ಪರಿಶೀಲನೆ ಸಂದರ್ಭ ಚುನಾವಣಾ ಏಜೆಂಟ್ ಮತ್ತು ನಿರ್ದೇಶಕರ ಜೊತೆಗೆ ಅಭ್ಯರ್ಥಿಯು,ಅಭ್ಯರ್ಥಿಯಿಂದ ನಾಮನಿರ್ದೇಶನಗೊಂಡ ಒಬ್ಬ ವ್ಯಕ್ತಿಗೆ ಚುನಾವಣಾಧಿಕಾರಿಯ ಕೊಠಡಿಯೊಳಗೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ.
ನಾಮಪತ್ರಗಳ ಪರಿಶೀಲನೆಗೆ ನಿಗದಿಪಡಿಸಿದ ದಿನಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿ ಸಲ್ಲಿಸಿರುವ ಮಾಹಿತಿ ಪರಿಶೀಲಿಸಲಾಗುತ್ತದೆ. ನಾಮಪತ್ರ ಸಲ್ಲಿಸುವ ದಿನದಂದು ಅಭ್ಯರ್ಥಿಯು 21ವರ್ಷ ಪೂರೈಸಿರಬೇಕಾಗಿದೆ. ನ.21ರ ಮಧ್ಯಾಹ್ನ 3 ಗಂಟೆಯೊಳಗೆ ಸ್ವೀಕರಿಸಲಾದ ಎಲ್ಲಾ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಒಬ್ಬ ಅಭ್ಯರ್ಥಿಯ ಒಂದಕ್ಕಿಂತ ಹೆಚ್ಚು ನಾಮಪತ್ರ ಸ್ವೀಕರಿಸಲಾಗುವುದಿಲ್ಲ. ಪರಿಶೀಲನೆ ನಂತರ ಚುನಾವಣಾಧಿಕಾರಿಯು ನಾಮಪತ್ರಗಳನ್ನು ಅಂಗೀಕರಿಸಿದ ಅಭ್ಯರ್ಥಿಗಳ ಪಟ್ಟಿಯ ಅಧಿಕೃತ ಘೋಷಣೆ ನಡೆಸಲಿದ್ದಾರೆ. ನ. 24ರಂದು ನಾಮಪತ್ರ ಹಿಂತೆಗೆಯಲು ಕೊನೆಯ ದಿನಾಂಕವಾಗಿರುತ್ತದೆ. ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಕಾಸರಗೋಡಿನಲ್ಲಿ ಡಿ. 11ರಂದು ಚುನಾವಣೆ ದಿನಾಂಕ ನಿಗದಿಯಾಗಿದೆ.




