ಕಾಸರಗೋಡು: ರಾಜ್ಯದ ಪ್ರತಿಯೊಂದು ಪಂಚಾಯಿತಿಯಲ್ಲಿ ವಿವಿಧ ಅಭಿವೃದ್ಧಿ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಕಾಸರಗೋಡು ಜಿಲ್ಲಾ ಪಂಚಾಯಿತಿ ಸಾಧನೆ ರಾಜ್ಯಕ್ಕೆ ಮಾದರಿಯಾಗಿರುವುದಾಗಿ ಪಶುಸಂಗೋಪನೆ ಮತ್ತು ಡೇರಿ ಅಭಿವೃದ್ಧಿ ಸಚಿವೆ ಜೆ. ಚಿಂಜುರಾಣಿ ತಿಳಿಸಿದ್ದಾರೆ.ಅವರು ಚೆರ್ಕಳ ಐಮ್ಯಾಕ್ಸ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ನವೆಂಬರ್ 1 ರಂದು ಕೇರಳ ರಾಜ್ಯೋದಯ ದಿನದಂದು ಕಡುಬಡವರೆಂದು ಗುರುತಿಸಲ್ಪಟ್ಟ 64,006 ಕುಟುಂಬಗಳನ್ನು ಸಮಾಜದ ಮುಖ್ಯವಾಹಿನಿಗೆ ತಂದ ದೇಶದ ಏಕೈಕ ರಾಜ್ಯವಾಗಿ ಕೇರಳ ಗುರುತಿಸಲ್ಪಡಲಿದ್ದು, ಮೂಲಸೌಕರ್ಯ, ಆಸ್ಪತ್ರೆಗಳು ಮತ್ತು ಶಾಲೆಗಳು ಸೇರಿದಂತೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಬದಲಾವಣೆಗಳು ಗೋಚರಿಸುತ್ತಿವೆ ಎಂದು ಸಚಿವರು ತಿಳಿಸಿದರು.
ಶಾಸಕ ಸಿ.ಎಚ್. ಕುಂಞಂಬು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಕ್ಕೆ ಮೊದಲು ಚೆರ್ಕಳ ಪೇಟೆಯಿಂದ ಐಮ್ಯಾಕ್ಸ್ ಸಭಾಂಗಣದವರೆಗೆ ಸಂಭ್ರಮದ ಮೆರವಣಿಗೆ ನಡೆಯಿತು.
ಐದು ವರ್ಷಗಳ ಅವಧಿಯಲ್ಲಿ ಸುಮಾರು ಆರು ಪ್ರಶಸ್ತಿಗಳನ್ನು ಗೆದ್ದು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಕಾಸರಗೋಡು ಜಿಲ್ಲಾ ಪಂಚಾಯಿತಿ ಆಡಳಿತ ಸಮಿತಿ ಹಾಗೂ ಸಿಬ್ಬಂದಿ ವರ್ಗವನ್ನು ಕಾಸರಗೋಡು ನಾಗರಿಕರ ವತಿಯಿಂದ ಸನ್ಮಾನಿಸಲಾಯಿತು. ಜಿಪಂ ವತಿಯಿಂದ ಜಿಲ್ಲೆಯ ಶಾಸಕರನ್ನು ಸನ್ಮಾನಿಸಲಾಯಿತು. ಶಾಸಕರಾದ ಸಿ.ಎಚ್.ಕುಂಜಂಬು ಮತ್ತು ಇ.ಚಂದ್ರಶೇಖರನ್ ಪ್ರಶಸ್ತಿ ಸ್ವೀಕರಿಸಿದರು. ಕಾಸರಗೋಡನ್ನು ಕಡು ಬಡತನ ಮುಕ್ತ ಜಿಲ್ಲೆ ಎಂದು ಘೋಷಿಸುವ ಸಂಬಂಧ, ಜಿಲ್ಲೆಯ ಎಲ್ಲಾ ಬ್ಲಾಕ್ ಪಂಚಾಯಿತಿ, ನಗರಸಭೆ, ಬ್ಲಾಕ್ ಪಂಚಾಯಿತಿ, ಗ್ರಾಮ ಪಂಚಾಯಿತಿ ಮತ್ತು ಅವುಗಳ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಡಾಕ್ಟರೇಟ್ ಪಡೆದ ಕೆಸಿಸಿಪಿಎಲ್ ವ್ಯವಸ್ಥಾಪಕ ನಿರ್ದೇಶಕಿ ಅನಕೈ ಬಾಲಕೃಷ್ಣನ್ ಅವರನ್ನು ಸಹ ಸನ್ಮಾನಿಸಲಾಯಿತು.






