ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯ ಪ್ರಚಾರ ಕಾಲಾವಧಿಯಲ್ಲಿ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಕಡ್ಡಾಯ ಕಾನೂನು ಪಾಲನೆಗೆ ಆದ್ಯತೆ ನೀಡುವಂತೆ ರಾಜ್ಯ ಚುನಾವಣಾ ಆಯೋಗವು ನಿರ್ದೇಶನ ನೀಡಿದೆ.
ವಿವಿಧ ಜಾತಿ ಮತ್ತು ಸಮುದಾಯಗಳ ನಡುವೆ ಧಾರ್ಮಿಕ, ಜನಾಂಗೀಯ, ಅಥವಾ ಭಾಷಾ ಸಂಘರ್ಷಗಳಿಗೆ ಕಾರಣವಾಗುವ ಹಾಗೂ ಕೋಮು ಪ್ರಚೋದಕ ಚಟುವಟಿಕೆಗಳಲ್ಲಿ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಭಾಗಿಯಾಗಬಾರದು. ಯಾವುದೇ ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳು ಇತರ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರ ಖಾಸಗಿ ಜೀವನದ ಬಗ್ಗೆ ಟೀಕೆ, ಆಧಾರರಹಿತ ಅಥವಾ ತಿರುಚಿದ ಆರೋಪ ನಡೆಸದಂತೆ ಸೂಚಿಸಲಾಗಿದೆ.
ಪೂಜಾಸ್ಥಳ, ಧಾರ್ಮಿಕ ಸಂಸ್ಥೆಗಳ ಹೆಸರಲ್ಲಿ ಮತ ಯಾಚನೆ ನಡೆಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಯಾವುದೇ ವ್ಯಕ್ತಿಯ ಅನುಮತಿಯಿಲ್ಲದೆ ಅವರ ಜಮೀನು, ಕಟ್ಟಡ ಅಥವಾ ಗೋಡೆಯ ಮೇಲೆ ಯಾವುದೇ ಬ್ಯಾನರ್, ಧ್ವಜ, ಜಾಹೀರಾತು ಫಲಕ ಅಥವಾ ಘೋಷಣಾ ಪತ್ರ ಲಗತ್ತಿಸಬಾರದು. ಸರ್ಕಾರಿ ಕಚೇರಿ, ಅವುಗಳ ಆವರಣಗೋಡೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗೋಡೆ ಬರಹಗಳು, ಪೆÇೀಸ್ಟರ್ ಅಂಟಿಸುವಿಕೆ, ಬ್ಯಾನರ್, ಕಟೌಟ್ ಇತ್ಯಾದಿ ಅಳವಡಿಸಲು ಅನುಮತಿ ನಿರಾಕರಿಸಲಾಗಿದೆ. ಯಾವುದೇ ಸಾರ್ವಜನಿಕ ಸ್ಥಳವನ್ನು ನಿರ್ದಿಷ್ಟ ಪಕ್ಷ ಅಥವಾ ಅಭ್ಯರ್ಥಿಗೆ ಮಾತ್ರ ಮೀಸಲಿಡಬಾರದು. ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಸ್ಥಳದಲ್ಲಿ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಯಾವುದೇ ಜಾಹೀರಾತು ಅಥವಾ ಘೋಷಣೆಗಳನ್ನು ಹಾಕದಂತೆ ನೋಡಿಕೊಳ್ಳಲು ಆಯೋಗವು ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಶಿಕ್ಷಣ ಸಂಸ್ಥೆಗಳ ಮೈದಾನವನ್ನು ಚುನಾವಣೆಗೆ ಸಂಬಂಧಿಸಿದ ರಾಜಕೀಯ ಪ್ರಚಾರ ಅಥವಾ ರ್ಯಾಲಿಗಳಿಗೆ ಬಳಸದಿರುವಂತೆಯೂ ಸೂಚಿಸಲಾಗಿದೆ.





