ಕಾಸರಗೋಡು: ಸರ್ಕಾರ ಘೋಷಿಸಿರುವ ವಿವಿಧ ಕಲ್ಯಾಣ ಯೋಜನೆಗಳು ನವೆಂಬರ್ 1 ರಿಂದ ಜಾರಿಗೆ ಬರಲಿದ್ದು, ಆ ಕುರಿತು ಆದೇಶ ಹೊರಡಿಸಲು ಸೂಚನೆ ನೀಡಲಾಗಿದೆ ಎಂದು ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ತಿಳಿಸಿದ್ದಾರೆ.
ಅವರು ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರವು ಕಾಞಂಗಾಡು ರಾಜ್ ರೆಸಿಡೆನ್ಸಿಯಲ್ಲಿ ಆಯೋಜಿಸಿದ್ದ ಮಹಿಳಾ ಹೂಡಿಕೆದಾರರ ಸಮಾವೇಶ ಮತ್ತು ರಫ್ತು ಕಾರ್ಯಾಗಾರ 'ಬಿ ಟು ಬಿ' ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಐವತ್ತು ಕೋಟಿ ರೂ. ವೆಚ್ಚದ ಕನ್ವೆನ್ಶನ್ ಸೆಂಟರ್‍ಗಳಿಗೆ ಕಡಿಮೆ ಬಡ್ಡಿದರದ ಸಾಲ ನೀಡುವ ಯೋಜನೆಯಿದ್ದು, ಜತೆಗೆ ಮಹಿಳೆಯರಿಗೆ ಅವರ ಮನೆ ಬಳಿಯಲ್ಲಿ 'ವರ್ಕ್ ನಿಯರ್ ಹೋಮ್'ಯೋಜನೆಯನ್ವಯ ಕಿರು ಉದ್ದಿಮೆ ಪ್ರಾರಂಭಿಸಲು ಸಾಲನೀಡುವ ಯೋಜನೆಗಳ ಲಾಭವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು. 62 ಲಕ್ಷ ಜನರಿಗೆ ಕಲ್ಯಾಣ ಪಿಂಚಣಿ, ಸುಮಾರು 32 ಲಕ್ಷ ಮಹಿಳೆಯರಿಗೆ ಭದ್ರತಾ ಪಿಂಚಣಿ ಮತ್ತು ಐದು ಲಕ್ಷ ಯುವಕರಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದ್ದು, ಒಂದು ಕುಟುಂಬಕ್ಕೆ ಮಾಸಿಕ 7000 ರೂ.ಗಳವರೆಗೆ ಸಹಾಯಧನ ನೀಡುವ ರೀತಿಯಲ್ಲಿ ಕಲ್ಯಾಣ ಯೋಜನೆಗಳನ್ನು ಘೋಷಿಸಲಾಗಿದೆ ಎಂದು ತಿಳಿಸಿದರು.
ಶಾಸಕ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಕೆ.ಸಜಿತ್ ಕುಮಾರ್ ವರದಿ ವಾಚಿಸಿದರು. ಶಾಸಕ ಎಂ. ರಾಜಗೋಪಾಲನ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಉಪಾಧ್ಯಕ್ಷ ಶಾನವಾಸ್ ಪಾದೂರು, ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಶಕುಂತಳಾ, ಕಾಞಂಗಾಡು ನಗರಸಭೆ ಅಧ್ಯಕ್ಷೆ ಕೆ.ವಿ. ಸುಜಾತಾ, ಜಿಲ್ಲಾ ಯೋಜನಾ ಸಮಿತಿ ಸದಸ್ಯ ವಿ.ವಿ. ರಮೇಶ, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ವಿಶೇಷ ಅಧಿಕಾರಿ ವಿ.ಚಂದ್ರನ್, ಅಸಂಘಟಿತ ಕಾರ್ಮಿಕರ ಕಲ್ಯಾಣ ನಿಧಿ ಮಂಡಳಿ ಕಾರ್ಯನಿರ್ವಾಹಕ ಅಧಿಕಾರಿ ಅಬ್ದುಲ್‍ಸಲಾಂ ಮೊದಲಾದವರು ಉಪಸ್ಥಿತರಿದ್ದರು.


