ಕಾಸರಗೋಡು: ದೃಷ್ಟಿ ದೋಷ ಅಥವಾ ಇತರೆ ದೈಹಿಕ ಅಸೌಖ್ಯ ಹೊಂದಿದ ಮತದಾರರಿಗೆ ಅವರ ಇಚ್ಛೆಯಂತೆ 18 ವರ್ಷ ಮೇಲ್ಪಟ್ಟ ಒಬ್ಬ ಸಹಾಯಕನನ್ನು ಮತದಾನದ ಗುಪ್ತ ಸ್ಥಳಕ್ಕೆ ಕರೆದೊಯ್ಯಲು ಅನುಮತಿ ನೀಡಲಾಗುವುದು. ಮತದಾರನು ಸ್ವತಂತ್ರವಾಗಿ ಮತಯಂತ್ರದ ಚಿಹ್ನೆಯನ್ನು ಗುರುತಿಸಲು ಅಥವಾ ಗುಂಡಿ ಒತ್ತಿ ಮತ ಚಲಾಯಿಸಲು ಸಾಧ್ಯವಿಲ್ಲ ಎಂದು ಪ್ರಿಸೈಡಿಂಗ್ ಆಫೀಸರ್‍ಗೆ ಮನವರಿಕೆಯಾದರೆ ಮಾತ್ರ ಅನುಮತಿ ನೀಡಲಾಗುವುದು. ಈ ರೀತಿ ಅನುಮತಿ ನೀಡಿದಾಗ, ಮತದಾರನ ಎಡಗೈ ತೋರು ಬೆರಳಿಗೆ ಶಾಯಿ ಹಚ್ಚುವುದರ ಜೊತೆಗೆ, ಸಹಾಯಕನ ಬಲಗೈ ತೋರು ಬೆರಳಿಗೆ ಸಹ ಅಳಿಸಲಾಗದ ಶಾಯಿ ಹಚ್ಚಲಾಗುವುದು.
ಅಭ್ಯರ್ಥಿ ಅಥವಾ ಮತಗಟ್ಟೆ ಏಜೆಂಟರನ್ನು ಮತದಾರರಿಗೆ ಸಹಾಯಕನನ್ನಾಗಿ ಅನುಮತಿಸಲಾಗುವುದಿಲ್ಲ. ಮತದಾರನ ಅನಕ್ಷರತೆಯ ಕಾರಣಕ್ಕೂ ಸಹಾಯಕನನ್ನು ಅನುಮತಿಸಲಾಗುವುದಿಲ್ಲ. ಒಬ್ಬ ವ್ಯಕ್ತಿಯನ್ನು ಯಾವುದೇ ಮತಗಟ್ಟೆಯಲ್ಲಿ ಒಂದಕ್ಕಿಂತ ಹೆಚ್ಚು ಮತದಾರರಿಗೆ ಸಹಾಯಕರಾಗಿ ಕೆಲಸ ಮಾಡಲು ಅನುಮತಿ ನೀಡಲಾಗುವುದಿಲ್ಲ.ತಾನು ದಾಖಲಿಸಿದ ಮತದ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದಾಗಿ ಮತ್ತು ಅದೇ ದಿನದಂದು ಬೇರೆ ಯಾವುದೇ ಮತಗಟ್ಟೆಯಲ್ಲಿ ಸಹಾಯಕರಾಗಿ ಕೆಲಸ ಮಾಡಿಲ್ಲ ಎಂದು ಸಹಾಯಕನು ನಿಗದಿತ ನಮೂನೆಯಲ್ಲಿ ಪ್ರಿಸೈಡಿಂಗ್ ಅಧಿಕಾರಿಗೆ ಲಿಖಿತ ಘೋಷಣೆಯನ್ನು ನೀಡಬೇಕು. ಈ ನಮೂನೆಯನ್ನು ಪ್ರಿಸೈಡಿಂಗ್ ಅಧಿಕಾರಿ ವಿಶೇಷ ಕವರಿನಲ್ಲಿ ಚುನಾವಣಾ ಅಧಿಕಾರಿಗೆ ಕಳುಹಿಸಿಕೊಡುತ್ತಾರೆ.
ಬ್ಯಾಲೆಟ್ ಘಟಕದಲ್ಲಿ ಬ್ರೈಲ್ ಲಿಪಿ ಅಳವಡಿಕೆ
ಅಂಧತ್ವ ಅಥವಾ ದೃಷ್ಟಿ ದೋಷವಿರುವ ಮತದಾರರು ಸ್ಥಳೀಯಾಡಳಿತ ಚುನಾವಣೆಯಲ್ಲಿ ಸ್ವತಃ ಮತ ಚಲಾಯಿಸಲು ಸಾಧ್ಯವಾಗುವಂತೆ ಬ್ಯಾಲೆಟ್ ಘಟಕದ ಬಲಬದಿಯಲ್ಲಿ ಬ್ರೈಲ್ ಲಿಪಿಯನ್ನು ಅಳವಡಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ. ದೃಷ್ಟಿ ದೋಷ ಇರುವವರು, ದೈಹಿಕ ಅಸೌಖ್ಯ ಬಾಧಿತರು ಮತ್ತು ವೃದ್ಧ ಮತದಾರರು ಸಾಲಿನಲ್ಲಿ ನಿಲ್ಲದೆ ನೇರವಾಗಿ ಮತಗಟ್ಟೆಗೆ ಪ್ರವೇಶಿಸಿ ಮತ ಚಲಾಯಿಸಲು ಚುನಾವಣಾ ಆಯೋಗ ವಿಶೇಷ ಸೌಲಭ್ಯ ಕಲ್ಪಿಸಿದೆ. ಜತೆಗೆ, ಮತದಾರರ ಅನುಕೂಲಕ್ಕಾಗಿ ಎಲ್ಲಾ ಮತಗಟ್ಟೆಗಳಲ್ಲಿ ರಾಂಪ್ ಸೌಲಭ್ಯವನ್ನು ಖಚಿತಪಡಿಸಲಾಗುವುದು. ಮತಗಟ್ಟೆಯಲ್ಲಿ ಕುಡಿಯುವ ನೀರು, ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಕಲ್ಪಿಸಲಾಗುವುದು ಎಂದುಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.




