HEALTH TIPS

ಪಾಕಿಸ್ತಾನ | ಇಮ್ರಾನ್‌ ಖಾನ್‌ ಗೆ 'ಡೆತ್‌ ಸೆಲ್‌ ಐಸೋಲೇಷನ್‌' ಆರೋಪ: ಜೀವಂತವಿರುವುದಕ್ಕೆ ಪುರಾವೆ ಕೇಳಿದ ಪುತ್ರ ಖಾಸಿಮ್‌

ಇಸ್ಲಾಮಾಬಾದ್‌: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ತೀವ್ರ ಏಕಾಂತದ ಬಂಧನದಲ್ಲಿರಿಸಿ, ಕುಟುಂಬಕ್ಕೆ ಪ್ರವೇಶವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ ಎಂದು, ಅವರ ಕಿರಿಯ ಪುತ್ರ ಖಾಸಿಮ್‌ ಖಾನ್‌ ಗಂಭೀರ ಆರೋಪ ಮಾಡಿದ್ದಾರೆ. ಇದು ಪಾಕಿಸ್ತಾನದ ರಾಜಕೀಯದಲ್ಲಿ ಆತಂಕದ ವಾತಾವರಣಕ್ಕೆ ಕಾರಣವಾಗಾದೆ.

ಸಾಮಾಜಿಕ ಜಾಲತಾಣ X ನಲ್ಲಿ ಬರೆದ ಪೋಸ್ಟ್ ನಲ್ಲಿ ಖಾಸಿಮ್‌ ಅವರು, 845 ದಿನಗಳಿಂದ ಬಂಧನದಲ್ಲಿರುವ ತಂದೆಯ ಸ್ಥಿತಿ ಏನೆಂದು ಕುಟುಂಬಕ್ಕೂ ಮಾಹಿತಿಯಿಲ್ಲ. ಅವರು ಜೀವಂತವಿರುವುದಕ್ಕೆ ಪುರಾವೆ ಕೊಡಿ ಎಂದು ಅವರು ಆಗ್ರಹಿಸಿದ್ದಾರೆ.

ಖಾಸಿಮ್‌ ಅವರು ಹೇಳುವಂತೆ, ಇಮ್ರಾನ್ ಖಾನ್‌ ಅವರನ್ನು ಕಳೆದ ಆರು ವಾರಗಳಿಂದ ಡೆತ್‌ ಸೆಲ್‌ ಎನ್ನುವ ಗರಿಷ್ಠ ಭದ್ರತಾ ಏಕಾಂತ ಕೊಠಡಿಯಲ್ಲಿ ಇರಿಸಲಾಗಿದ್ದು, ಕುಟುಂಬ ಭೇಟಿಗೂ ಅವಕಾಶ ನೀಡಿಲ್ಲ. ಸಹೋದರಿಯರಿಗೂ ಭೇಟಿಗೆ ಅವಕಾಶ ನಿರಾಕರಿಸಲಾಗಿದೆ. ಫೋನ್‌ ಕರೆಗಳಿಲ್ಲ. ಅವರು ಜೀವಂತವಿರುವುದಕ್ಕೆ ಪುರಾವೆಗಳಿಲ್ಲ. ನಾವು ಅವರೊಂದಿಗೆ ಯಾವುದೇ ಸಂಪರ್ಕದಲ್ಲಿಲ್ಲ," ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ."

"ಇದು ಭದ್ರತಾ ಕ್ರಮವಲ್ಲ. ಅವರ ನಿಜವಾದ ಸ್ಥಿತಿಯನ್ನು ಮರೆಮಾಚಲು ಕೈಗೊಂಡಿರುವ ಉದ್ದೇಶಿತ ಪ್ರಯತ್ನ," ಎಂದು ಖಾಸಿಮ್‌ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಂದೆಯ ಸುರಕ್ಷತೆಗೆ ಸರ್ಕಾರ ಮತ್ತು ಆಡಳಿತವನ್ನು ಕಾನೂನುಬದ್ಧ, ನೈತಿಕ ಮತ್ತು ಅಂತರರಾಷ್ಟ್ರೀಯವಾಗಿ ಹೊಣೆಗಾರರನ್ನಾಗಿ ಮಾಡುವುದಾಗಿ ಅವರು ಎಚ್ಚರಿಸಿದ್ದಾರೆ.

ಈ ವಿಚಾರವಾಗಿ ಅಂತರರಾಷ್ಟ್ರೀಯ ಮಧ್ಯಪ್ರವೇಶಕ್ಕೆ ಮನವಿ ಮಾಡಿದ ಖಾಸಿಮ್‌, ಜಾಗತಿಕ ಮಾನವ ಹಕ್ಕುಗಳ ಸಂಸ್ಥೆಗಳು ಮತ್ತು ಅಂತರರಾಷ್ಟ್ರೀಯ ಸಮುದಾಯವು ತುರ್ತಾಗಿ ಮಧ್ಯಪ್ರವೇಶಿಸಿ, ಜೀವಂತವಿರುವುದಕ್ಕೆ ಪುರಾವೆ ಬಿಡುಗಡೆ ಮಾಡಬೇಕು. ನ್ಯಾಯಾಲಯದ ಆದೇಶದಂತೆ ಕುಟುಂಬ ಭೇಟಿ, ಏಕಾಂತ ಬಂಧನ ಅಂತ್ಯ ಮತ್ತು ರಾಜಕೀಯ ಕಾರಣಗಳಿಂದ ಬಂಧಿತರಾಗಿರುವ ತಮ್ಮ ತಂದೆಯ ಬಿಡುಗಡೆಗಾಗಿ ಒತ್ತಾಯಿಸಬೇಕೆಂದು ಆಗ್ರಹಿಸಿದ್ದಾರೆ.

ಪಿಟಿಐ ಪಕ್ಷವೂ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕುಟುಂಬ ಪ್ರವೇಶ ತಡೆಯುವಿಕೆಯಿಂದ ವದಂತಿಗಳಿಗೆ ಅವಕಾಶ ಸಿಕ್ಕಿದೆ ಎಂದು ಆರೋಪಿಸಿದೆ. ಇಮ್ರಾನ್‌ ಖಾನ್ ಜೈಲಿನಲ್ಲೇ ಕೊಲ್ಲಲ್ಪಟ್ಟಿದ್ದಾರೆ ಎನ್ನುವ ಸುಳ್ಳು ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದರೆ, ಸರ್ಕಾರ ಇದನ್ನು ಸಂಪೂರ್ಣ ಸುಳ್ಳು ಎಂದು ತಳ್ಳಿ ಹಾಕಿದೆ.

ಅಡಿಯಾಲಾ ಜೈಲಿನ ಹೊರಗೆ ಇಮ್ರಾನ್‌ ಅವರ ಮೂವರು ಸಹೋದರಿಯರು ಮತ್ತು ಪಿಟಿಐ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ವೇಳೆ ಉದ್ವಿಗ್ನತೆ ಹೆಚ್ಚಿತು. ನಂತರ ಸಾವಿರಾರು ಬೆಂಬಲಿಗರು ಸೇರಿಕೊಂಡಿದ್ದು, ಕುಟುಂಬ ಭೇಟಿ ಅನುಮತಿಸುವಂತೆ ಆಗ್ರಹಿಸಿದರು. ಜೈಲು ಆಡಳಿತ ಅಲೀಮಾ ಖಾನ್‌ ಅವರಿಗೆ ಭೇಟಿ ಅನುಮತಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.

ವದಂತಿಗಳನ್ನು ತಳ್ಳಿ ಹಾಕಿದ ಜೈಲು ಆಡಳಿತ, ಇಮ್ರಾನ್‌ ಖಾನ್‌ ಅಡಿಯಾಲಾ ಜೈಲಿನಲ್ಲೇ ಇದ್ದಾರೆ, ಅವರ ಆರೋಗ್ಯ ಸ್ಥಿರವಾಗಿದೆ ಮತ್ತು ಅಗತ್ಯವಿರುವ ವೈದ್ಯಕೀಯ ಸೇವೆಗಳು ಲಭ್ಯವಿವೆ ಎಂದು ತಿಳಿಸಿದೆ. ಪಿಟಿಐ ಪಕ್ಷದ ಸಂಸ್ಥಾಪಕ ಇಮ್ರಾನ್ ಖಾನ್ ಅವರಿಗೆ ವಿಶೇಷ ಸೌಲಭ್ಯಗಳನ್ನು ನೀಡಲಾಗಿದೆ ಎಂದು ರಕ್ಷಣಾ ಸಚಿವ ಆಸಿಫ್‌ ಖ್ವಾಜಾ ಹೇಳಿದ್ದಾರೆ. "ಇಮ್ರಾನ್‌ ಅವರಿಗೆ ಫೈವ್ ಸ್ಟಾರ್ ಹೊಟೇಲ್ ನಲ್ಲೂ ಸಿಗದ ಸೌಲಭ್ಯಗಳು, ವಿಶೇಷ ಊಟ, ಟಿವಿ, ವ್ಯಾಯಾಮೋಪಕರಣ, ವೆಲ್ವೆಟ್‌ ಹಾಸಿಗೆ ಎಲ್ಲವನ್ನೂ ನೀಡಲಾಗಿದೆ," ಎಂದು ಅವರು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries