ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಅಮೆರಿಕದ ವಲಸೆ ನೀತಿಯನ್ನು ಬಿಗಿಗೊಳಿಸುವುದಾಗಿ ಘೋಷಿಸಿದ್ದಾರೆ. ಎಲ್ಲಾ ತೃತೀಯ ಜಗತ್ತಿನ ದೇಶಗಳಿಂದ ಬರುವ ವಲಸಿಗರನ್ನು ಶಾಶ್ವತವಾಗಿ ಸ್ಥಗಿತಗೊಳಿಸುವುದಾಗಿ ಹೇಳಿದ್ದಾರೆ. ಇದು ದೇಶದೊಳಗಿನ ವ್ಯವಸ್ಥೆಗಳನ್ನು ಸುಧಾರಿಸುವ, ಅಕ್ರಮ ವಲಸೆಯನ್ನು ತಡೆಯುವ ಪ್ರಮುಖ ಗುರಿಯನ್ನು ಹೊಂದಿದೆ.
ಶ್ವೇತಭವನದ ಬಳಿ ಅಫ್ಘಾನ್ ಪ್ರಜೆಯೊಬ್ಬರು ಇಬ್ಬರು ರಾಷ್ಟ್ರೀಯ ಗಾರ್ಡ್ ಸಿಬ್ಬಂದಿ ಮೇಲೆ ಗುಂಡು ಹಾರಿಸಿದ ಕೆಲವು ದಿನಗಳ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಈ ಕುರಿತು ಟ್ರೂತ್ ಸೋಶಿಯಲ್ ನಲ್ಲಿ ಪೋಸ್ಟ್ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಾನು ಎಲ್ಲಾ ತೃತೀಯ ವಿಶ್ವ ದೇಶಗಳಿಂದ ಬರುವ ವಲಸೆಯನ್ನು ಶಾಶ್ವತವಾಗಿ ನಿಲ್ಲಿಸುತ್ತೇನೆ. ಅಮೆರಿಕದ ವ್ಯವಸ್ಥೆ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಇದು ಬೇಕು. ಜೋ ಬಿಡೆನ್ ಅವರ ಆಟೊಪೆನ್ ಸಹಿ ಮಾಡಿದವರು ಸೇರಿದಂತೆ ಲಕ್ಷಾಂತರ ಬಿಡೆನ್‌ರ ಅಕ್ರಮ ಪ್ರವೇಶಗಳನ್ನು ಕೊನೆಗೊಳಿಸುತ್ತೇನೆ. ಅಮೆರಿಕಕ್ಕೆ ಲಾಭವಿಲ್ಲದವರನ್ನು, ನಮ್ಮ ದೇಶವನ್ನು ಪ್ರೀತಿಸಲು ಆಗದವರನ್ನು ದೇಶದಿಂದ ಹೊರಗೆ ಕಳುಹಿಸುತ್ತೇನೆ ಎಂದು ಹೇಳಿದರು.
ನಮ್ಮ ದೇಶದ ನಾಗರಿಕರಲ್ಲದವರಿಗೆ ಎಲ್ಲಾ ಫೆಡರಲ್ ಪ್ರಯೋಜನಗಳು ಮತ್ತು ಸಬ್ಸಿಡಿಗಳನ್ನು ಕೊನೆಗೊಳಿಸುತ್ತೇನೆ, ದೇಶದ ಶಾಂತಿಯನ್ನು ಹಾಳುಮಾಡುವ ವಲಸಿಗರನ್ನು ಹೊರಹಾಕುತ್ತೇನೆ ಮತ್ತು ಸಾರ್ವಜನಿಕ ಶುಲ್ಕ, ಭದ್ರತಾ ಅಪಾಯ ಅಥವಾ ಪಾಶ್ಚಿಮಾತ್ಯ ನಾಗರಿಕತೆಗೆ ಹೊಂದಿಕೆಯಾಗದ ಯಾವುದೇ ವಿದೇಶಿ ಪ್ರಜೆಯನ್ನು ಗಡೀಪಾರು ಮಾಡುತ್ತೇನೆ ಎಂದು ಟ್ರಂಪ್ ಹೇಳಿದ್ದಾರೆ.




