ಕಾಸರರಗೋಡು: ಮಧೂರು ಸನಿಹದ ಸಿರಿಬಾಗಿಲಿನಲ್ಲಿ ಕಾಸರಗೋಡು ನಗರ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆಟೋರಿಕ್ಷಾದಲ್ಲಿ ಸಾಗಿಸುತ್ತಿದ್ದ 28.32ಗ್ರಾಂ ಮಾರಕೆಂಡಿಎಂಎ ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮುಳಿಯಾರು ಮಾಸ್ತಿಕುಂಡು ಕ್ವಾಟ್ರಸ್‍ನಲ್ಲಿ ವಾಸಿಸುತ್ತಿರುವ ಕೆ. ಉಸ್ಮಾನ್ ಯಾನೆ ಚಾರ್ಲಿ ಉಸ್ಮಾನ್ ಹಾಗೂ ಮಧೂರು ಸಿರಿಬಾಗಿಲು ನಿವಾಸಿ ಎಂ. ಅಬ್ದುಲ್ ರಹಮಾನ್ ಎಂಬವರನ್ನು ಬಂಧಿಸಿದ್ದಾರೆ. ಸಿರಿಬಾಗಿಲಿನಲ್ಲಿ ವಾಹನ ತಪಾಸಣೆ ನಡೆಸುವ ಮಧ್ಯೆ ಪೆರಿಯಡ್ಕ ಭಾಗದಿಂದ ಆಗಮಿಸಿದ ಆಟೋರಿಕ್ಷಾ ತಡೆದು ತಪಾಸಣೆಗೆ ಮುಂದಾಗುತ್ತಿದ್ದಂತೆ ಅದರಲ್ಲಿದ್ದವರು ಓಡಿ ಪರಾರಿಯಾಗಲೆತ್ನಿಸುತ್ತಿದ್ದಂತೆ ಪೊಲೀಸರು ಬಲಪ್ರಯೋಗಿಸಿ ಇವರನ್ನು ಸೆರೆಹಿಡಿದಿದ್ದಾರೆ. ನಂತರ ಆಟೋರಿಕ್ಷಾದ ಚಾಲಕನ ಸೀಟಿನಡಿ ಅವಿತಿರಿಸಲಾಗಿದ್ದ ಎಂಡಿಎಂಎ ವಶಕ್ಕೆ ತೆಗೆದುಕೊಂಡಿದ್ದಾರೆ.ನಗರ ಠಾಣೆ ಎಸ್.ಐ ಕೆ.ರಾಜೀವನ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ.




