ಕಾಸರಗೋಡು: ಖ್ಯಾತ ಸಾಹಿತಿ ಡಾ. ಪ್ರಭಾಕರ ಶಿಶಿಲ ಅವರ ಎರಡು ಕೃತಿಗಳನ್ನು ಕೇಂದ್ರ, ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಕಾಸರಗೋಡಿನ ಕೆ.ವಿ. ಕುಮಾರನ್ ಮಾಸ್ತರ್ ಮಲಯಾಳಕ್ಕೆ ಅನುವಾದಿಸಿದ್ದು ಅದರ ಬಿಡುಗಡೆ ಸಮಾರಂಭ ಗುರುವಾರ ಪಿಲಿಕುಂಜೆ ಜಿಲ್ಲಾ ಲೈಬ್ರರಿ ಸಭಾಂಗಣದಲ್ಲಿ ಅಪರಾಹ್ನ ನಡೆಯಿತು.
ಸಮಾರಂಭವನ್ನು ಉದ್ಘಾಟಿಸಿದ ಲೈಬ್ರರಿ ಕೌನ್ಸಿಲ್ ಮುಖಂಡರಾದ ಪಿ.ವಿ.ಕೆ. ಪನಯಾಲ್ ಮಾತನಾಡಿ,ಸಾಹಿತ್ಯ ಕೃತಿಗಳ ಭಾಷಾಂತರ ಕೇವಲ ರಸಾಸ್ವಾದನೆಯ ಉದ್ದೇಶವಷ್ಟೇ ಅಲ್ಲದೆ ಸಾಂಸ್ಕøತಿಕ, ಸಾಮಾಜಿಕ ಸಹಿತ ವಿವಿಧ ಆಯಾಮಗಳ ವಿನಿಮಯವಾಗಿ ಮಹತ್ವಿಕೆಯನ್ನು ಹೊಂದಿದೆ. ಡಾ.ಶಿಶಿಲರ ವಿಶಿಷ್ಟ ಓದಿನ ಕೃತಿಗಳೆಲ್ಲ ವಿವಿಧ ಭಾಷೆಗೆ ಇನ್ನಷ್ಟು ಭಾಷಾಂತರಗೊಳ್ಳಬೇಕು ಎಂದರು.
ಪಿ ದಾಮೋದರನ್ ಅಧ್ಯಕ್ಷತೆ ವಹಿಸಿದ್ದರು. 'ಕರ್ನಾಟಕದಲ್ಲಿ ಕೃಷಿಕರ ಹೋರಾಟ' ಪುಸ್ತಕವನ್ನು ಡಾ.ಸಿ.ಬಾಲನ್ ಹಾಗೂ 'ಚಿತಾಗ್ನಿ' ಕೃತಿಯನ್ನು ಡಾ. ರಾಧಾಕೃಷ್ನ ಬೆಳ್ಳೂರು ಬಿಡುಗಡೆಗೊಳಿಸಿದರು. ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಮತ್ತು ಸಾಹಿತಿ ರವೀಂದ್ರನ್ ಪಾಡಿ ಮೊದಲ ಪ್ರತಿಗಳನ್ನು ಸ್ವೀಕರಿಸಿದರು. ಕೃತಿಕರ್ತ ಡಾ. ಪ್ರಭಾಕರ ಶಿಶಿಲ, ಅನುವಾದಕ ಕೆ.ವಿ. ಕುಮಾರನ್ ಉಪಸ್ಥಿತರಿದ್ದರು. ಕಾರ್ತಿಕ್ ಪಡ್ರೆ ಕೃತಿಕರ್ತರನ್ನು ಪರಿಚಯಿಸಿ ಮಾತನಾಡಿದರು. ಬಾಲಕೃಷ್ಣ ಚೆರ್ಕಳ ವಂದಿಸಿದರು.







