ಕಾಸರಗೋಡು: ರಾಜ್ಯ ಚುನಾವಣಾ ಆಯೋಗವು ಮುಂಬರುವ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ, ಮತದಾರರಿಗೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ನಿಟ್ಟಿನಲ್ಲಿ ಡಿಸೆಂಬರ್ 9 ಮತ್ತು 11ರಂದು ಸಂಬಂಧಪಟ್ಟ ಜಿಲ್ಲೆಗಳಲ್ಲಿ ಸಾರ್ವಜನಿಕ ರಜೆಯನ್ನು ಘೋಷಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಈ ದಿನಗಳನ್ನು ನೆಗೋಷಿಯೇಬಲ್ ಇನ್‍ಸ್ಟ್ರುಮೆಂಟ್ಸ್ ಆಕ್ಟ್ ಪ್ರಕಾರ ರಜಾ ದಿನವಾಗಿ ಪರಿಗಣಿಸಲು ಆಯೋಗ ಶಿಫಾರಸು ಮಾಡಿದೆ.
ಇದರ ಜತೆಗೆ ರಾಜ್ಯದ ಕಾರ್ಖಾನೆ, ತೋಟಗಾರಿಕೆ ಮತ್ತು ಇತರ ವಲಯಗಳ ನೌಕರರಿಗೆ ಸಾರ್ವಜನಿಕ ರಜೆ ನೀಡಲು ಅಥವಾ ಮತದಾನದ ಹಕ್ಕನ್ನು ಚಲಾಯಿಸಲು ಅವರಿಗೆ ಅನುಕೂಲ ಕಲ್ಪಿಸಲು ಉದ್ಯೋಗದಾತರಿಗೆ ನಿರ್ದೇಶನ ನೀಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವಂತೆಯೂ ಆಯೋಗ ಸೂಚಿಸಿದೆ.
ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆಗಳ ಉದ್ಯೋಗಿಗಳಿಗೆ ಮತದಾನದ ದಿನಗಳಲ್ಲಿ ರಜೆ ನೀಡಲು ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಚುನಾವಣಾ ಆಯೋಗವು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯನ್ನು ಕೋರಿದೆ. ಕಾಸರಗೋಡು ಜಿಲ್ಲೆಯಲ್ಲಿ ಡಿಸೆಂಬರ್ 11 ರಂದು ಮತದಾನ ನಡೆಯಲಿರುವುದರಿಂದ ಈ ದಿನದಂದು ರಜೆ ಇರಲಿದೆ. ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದೆ.




