ವಿಶ್ವಸಂಸ್ಥೆ: ಸಿರಿಯದ ಮಧ್ಯಂತರ ಅಧ್ಯಕ್ಷ ಅಹ್ಮದ್ ಅಲ್-ಶಾರಾ ಹಾಗೂ ಗೃಹ ಸಚಿವ ಅನಾಸ್ ಹಸನ್ ಖಟ್ಟಾಬ್ ಮೇಲೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ತೆಗೆದುಹಾಕುವ ಅಮೆರಿಕ ಬೆಂಬಲಿತ ನಿರ್ಣಯದ ಪರವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಮತಚಲಾಯಿಸಿದೆ.
ಮುಂದಿನ ವಾರ ಶ್ವೇತಭವನಕ್ಕೆ ಅಲ್-ಶರಾ ಅವರ ಯೋಜಿತ ಭೇಟಿಗೆ ಮುಂಚಿತವಾಗಿ ಸಿರಿಯದ ಈ ಇಬ್ಬರು ನಾಯಕರ ವಿರುದ್ಧ ನಿರ್ಬಂಧಗಳನ್ನು ವಿಶ್ವಸಂಸ್ಥೆ ರದ್ದುಪಡಿಸಿರುವುದು ಗಮನಾರ್ಹವಾಗಿದೆ.
ಸೋಮವಾರ ಅಲ್-ಶಾರಾ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.ಇತಿಹಾಸದಲ್ಲೇ ಸಿರಿಯ ಅಧ್ಯಕ್ಷರ ಪ್ರಪ್ರಥಮ ವಾಶಿಂಗ್ಟನ್ ಭೇಟಿ ಇದಾಗಲಿದೆ ಎಂದು ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಶ್ರೇಷ್ಠತೆಯನ್ನು ಸಾಧಿಸಲು ಸಿರಿಯಗೆ ಇರುವ ಅವಕಾಶ ಇದಾಗಿದೆ ಎಂದು ವಿಶ್ವಸಂಸ್ಥೆಯ ಅಮೆರಿಕ ರಾಯಭಾರಿ ತಿಳಿಸಿದ್ದಾರೆ. ವಿಶ್ವಸಂಸ್ಥೆ ಸನದಿನ ಏಳನೇ ಅಧ್ಯಾಯದಡಿ ಸಿರಿಯದ ಅಧ್ಯಕ್ಷ ಹಾಗೂ ಗೃಹ ಸಚಿವ ಅವರ ಅಸ್ತಿಗಳನ್ನು ಇನ್ನು ಮುಂದೆ ಮುಟ್ಟುಗೋಲು ಹಾಕಲಾಗುವುದಿಲ್ಲ ಅಥವಾ ಅವರ ವಿರುದ್ಧ ಪ್ರಯಾಣ ನಿಷೇಧವನ್ನು ಹೇರಲಾಗುವುದಿಲ್ಲ ಎಂದು ಭದ್ರತಾ ಮಂಡಳಿಯು ಘೋಷಿಸಿದೆ.




