ಬೆಂಗಳೂರು : ಇಲ್ಲಿನ ಚಿಕ್ಕಬಾಣಾವರ ರೈಲು ನಿಲ್ದಾಣದಲ್ಲಿ ದಾರುಣ ಘಟನೆಯೊಂದು ನಡೆದಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ ಕೇರಳ ಮೂಲದ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಮೃತಪಟ್ಟಿದ್ದು, ಮೇಲ್ನೋಟಕ್ಕೆ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.
ವಿದ್ಯಾರ್ಥಿ ಜಸ್ಟಿನ್ ಜೋಸೆಫ್ (21) ಹಾಗೂ ವಿದ್ಯಾರ್ಥಿನಿ ಸ್ಟೆರಿನ್ ಎಲ್ಜಾ ಸಜಿ (19) ಮೃತರು.
ಘಟನೆ ಸಂಬಂಧ ಬೆಂಗಳೂರು ಗ್ರಾಮಾಂತರ ರೈಲ್ವೇ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೇರಳದ ಪಟ್ಟನಂತಿಟ್ಟ ಮೂಲದವರಾದ ಇಬ್ಬರೂ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಎಸ್‌ಸಿ ನರ್ಸಿಂಗ್ ಎರಡನೇ ಸೆಮಿಸ್ಟರ್ನಲ್ಲಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ.
ರವಿವಾರ ಸಂಜೆ ಚಿಕ್ಕಬಾಣಾವರ ನಿಲ್ದಾಣದ ಬಳಿ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿದ್ದಾರೆ. ಪರಿಣಾಮ ಇಬ್ಬರೂ ಸಹ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಘಟನೆ ಸಂಬಂಧ ರಾಜ್ಯ ರೈಲ್ವೆ ಎಸ್ಪಿ ಯತೀಶ್ ಎನ್, ''ಮೃತರಿಬ್ಬರು ಸ್ನೇಹಿತರಾಗಿದ್ದು, ರೈಲಿನ ಸಿಸಿಟಿವಿ ಪರಿಶೀಲಿಸಿದಾಗ ಮೇಲ್ನೋಟಕ್ಕೆ ಇಬ್ಬರೂ ಆತ್ಮಹತ್ಯೆಗೆ ಮಾಡಿಕೊಂಡಿರುವುದು ಕಂಡು ಬಂದಿದೆ. ಸದ್ಯದ ತನಿಖೆಯಲ್ಲಿ ಯಾವುದೇ ರೀತಿಯ ಡೆತ್ ನೋಟ್ ದೊರೆತಿಲ್ಲ. ಗ್ರಾಮಾಂತರ ರೈಲ್ವೆ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಯ ಕಾರಣದ ಕುರಿತು ತನಿಖೆ ನಡೆಸಲಾಗುತ್ತಿದೆ'' ಎಂದು ಮಾಹಿತಿ ನೀಡಿದ್ದಾರೆ.




