HEALTH TIPS

ಓದಿದ್ದನ್ನು ಪರಿಣಾಮಕಾರಿಯಾಗಿ ನೆನಪಿಟ್ಟುಕೊಳ್ಳಲು ಈ ಒಂದು ಸರಳ ಕೆಲಸ ಮಾಡಿದ್ರೆ ಸಾಕು ಎನ್ನುತ್ತೆ ಅಧ್ಯಯನ

ಹಲವರು ಓದಿದ್ದನ್ನು ನೆನಪಿಟ್ಟುಕೊಳ್ಳಲು ತುಂಬಾನೇ ಕಷ್ಟಪಡುತ್ತಾರೆ. ಅದರಲ್ಲೂ ಮಕ್ಕಳಿಗೆ ಪಠ್ಯವು ಹೊರೆಯಂತೆ ಭಾಸವಾಗುತ್ತದೆ. ಹಗಲಿರುಳು ಓದಿದ್ರೂ ಕ್ಷಣ ಮಾತ್ರದಲ್ಲಿ ಎಲ್ಲವನ್ನೂ ಮರೆತು ಬಿಡುತ್ತಾರೆ. ಈ ಕಾರಣಕ್ಕೆ ಅನೇಕ ಪೋಷಕರು ಮಕ್ಕಳ ಮೇಲೆ ಸಿಟ್ಟಾಗುತ್ತಾರೆ.

ಜೊತೆಗೆ ಮಕ್ಕಳು ಓದಿದ್ದನ್ನು ನೆನಪಿಟ್ಟುಕೊಳ್ಳಲು ಬೆಳಗ್ಗೆ 4-5 ಗಂಟೆಗೆ ಎಬ್ಬಿಸಿ ಓದಿಸುವಂತಹದ್ದು ಇತ್ಯಾದಿ ಸರ್ಕಸ್‌ಗಳನ್ನು ಮಾಡುತ್ತಾರೆ. ಆದ್ರೆ ಓದಿದ್ದನ್ನು ಪರಿಣಾಮಕಾರಿಯಾಗಿ ನೆನಪಿಟ್ಟುಕೊಳ್ಳುವುದು ಹೇಗಪ್ಪಾ ಎಂದು ಟೆನ್ಷನ್‌ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ,  ಇದಕ್ಕಾಗಿ ವ್ಯಾಯಾಮ ಮಾಡಿದ್ರೆ ಸಾಕು ಎನ್ನುತ್ತೆ ಅಧ್ಯಯನ. ಹಾಗಿದ್ರೆ ವ್ಯಾಯಾಮ ಸ್ಮರಣಶಕ್ತಿಯನ್ನು ಹೆಚ್ಚಿಸಲು ಹೇಗೆ ಸಹಕಾರಿ ಎಂಬ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.

ಓದಿದ್ದನ್ನು ನೆನಪಿಟ್ಟುಕೊಳ್ಳಲು ವ್ಯಾಯಾಮ ಸಹಕಾರಿ:

ಓದಿದ ಅಥವಾ ಅಧ್ಯಯನ ಮಾಡಿದ ಕೆಲವು ಗಂಟೆಗಳ ನಂತರ ವ್ಯಾಯಾಮ ಮಾಡುವುದರಿಂದ ಸ್ಮರಣ ಶಕ್ತಿ ಗಮನಾರ್ಹವಾಗಿ ಹೆಚ್ಚುತ್ತದೆ, ಓದಿದ್ದೆಲ್ಲಾ ನೆನಪಿಟ್ಟುಕೊಳ್ಳಬಹುದು. ಒಟ್ಟಾರೆಯಾಗಿ ವ್ಯಾಯಾಮವು ಉತ್ತಮ ಕಲಿಕೆಗಾಗಿ ಮೆದುಳನ್ನು ಮರುಸಂಪರ್ಕಿಸುತ್ತದೆ ಎಂಬ ವಿಚಾರ ಸಂಶೋಧನೆಯಿಂದ ತಿಳಿದು ಬಂದಿದೆ.

ಓದಿದ ತಕ್ಷಣವೇ ವ್ಯಾಯಾಮ ಮಾಡುವ ಬದಲು ಓದಿದ, ಅಧ್ಯಯನ ನಡೆಸಿದ ನಾಲ್ಕು ಗಂಟೆಗಳ ನಂತರ ಮಾಡುವಂತಹ ದೈಹಿಕ ವ್ಯಾಯಾಮವು ಸ್ಮರಣಶಕ್ತಿಯನ್ನು ಧಾರಣಶಕ್ತಿಯನ್ನು ಸುಧಾರಿಸುತ್ತದೆ ಮತ್ತು ಓದಿದ್ದನ್ನು ನೆನಪಿಸಿಕೊಳ್ಳುವ  ಸಮಯದಲ್ಲಿ ಹಿಪೊಕ್ಯಾಂಪಸ್ ಮಾದರಿಯ ಹೋಲಿಕೆಯನ್ನು ಹೆಚ್ಚಿಸುತ್ತದೆ. ಕರೆಂಟ್ ಬಯಾಲಜಿ ಎ ಸೆಲ್ ಪ್ರೆಸ್ ನಿಯತಕಾಲಿಕೆಯಲ್ಲಿ ಪ್ರಕಟವಾದ ಈ ಅಧ್ಯಯನ, ವ್ಯಾಯಾಮವು ಓದಿದ್ದನ್ನು ನೆನಪಿಟ್ಟುಕೊಳ್ಳಲು ಸಹಕಾರಿ ಎಂಬ ವಿಚಾರ ಬಹಿರಂಗಪಡಿಸಿದೆ.

ವ್ಯಾಯಾಮವು ಸ್ಮರಣಶಕ್ತಿಯ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿಯಲು ನಡೆಸಿದ ಈ ಅಧ್ಯಯನದಲ್ಲಿ 72 ಜನರನ್ನು ಒಳಪಡಿಸಲಾಗಿತ್ತು. ಭಾಗವಹಿಸುವವರನ್ನು ತಲಾ ಮೂರು ಗುಂಪುಗಳಾಗಿ ವಿಂಗಡಿಸಿ, ಒಂದು ಗುಂಪನ್ನು ಓದಿದ ತಕ್ಷಣ ವ್ಯಾಯಾಮ ಮಾಡಲು ಹೇಳಲಾಯಿತು. ಇನ್ನೊಂದು ಗುಂಪನ್ನು  ಓದಿದ ನಾಲ್ಕು ಗಂಟೆಗಳ ನಂತರ ವ್ಯಾಯಾಮ ಮಾಡಲು ಹೇಳಲಾಯಿತು. ಮೂರನೇ ಗುಂಪನ್ನು ವ್ಯಾಯಾಮ ಮಾಡದಿರಲು ಹೇಳಲಾಯಿತು. ಎರಡು ದಿನಗಳ ಕಾಲ ಈ 72 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ ಓದಿದ ನಾಲ್ಕು ಗಂಟೆಗಳ ನಂತರ ಓದಿದ ಗುಂಪು ಅತ್ಯುತ್ತಮ ಪ್ರದರ್ಶನ ನೀಡಿತು.

ನಾವು ಹೊಸದನ್ನು ಕಲಿತಾಗ, ನಮ್ಮ ಮೆದುಳು ಆರಂಭಿಕ ಸ್ಮರಣೆಯ ಕುರುಹುಗಳು (early memory traces) ಎಂದು ಕರೆಯಲ್ಪಡುವ ರಿಸರ್ಚರ್ಸ್‌ ಸೆಲ್‌ಗಳನ್ನು ರೂಪಿಸುತ್ತದೆ. ಇದು ಸಂಪರ್ಕಗಳನ್ನು ಬಲಪಡಿಸುವ ಮತ್ತು ಸ್ಥಿರಗೊಳಿಸುವ ಪ್ರಕ್ರಿಯೆಯಾಗಿದ್ದು, ಈ ಸಮಯದಲ್ಲಿ ವ್ಯಾಯಾಮ ಮಾಡುವುದರಿಂದ ಓದಿದ ವಿಷಯಗಳು  ದೀರ್ಘಕಾಲ ಉಳಿಯುತ್ತವೆ. ಅದೇ ಕಲಿತ ಕೂಡಲೇ ವ್ಯಾಯಾಮ ಮಾಡಿದರೆ, ದೇಹ ಮತ್ತು ಮೆದುಳು ಎರಡೂ ಬಹಳ ಸೂಕ್ಷ್ಮ ಹಂತದಲ್ಲಿರುತ್ತವೆ. ಅಂತಹ ಸಂದರ್ಭದಲ್ಲಿ ವ್ಯಾಯಾಮ ಮಾಡುವುದು ಅಷ್ಟು ಪರಿಣಾಮಕಾರಿಯಲ್ಲ ಎಂದು  ಸಂಶೋಧನೆ ಹೇಳಿದೆ. ಆದರೆ ನಾವು ಓದಿದ  ಕೆಲವು ಗಂಟೆಗಳ ನಂತರ ವ್ಯಾಯಾಮ ಮಾಡುವುದರಿಂದ, ಮೆದುಳಿಗೂ ಕಲಿತ ಅಂಶಗಳನ್ನು ನೆನಪಿಟ್ಟುಕೊಳ್ಳಲು ಅಡಿಪಾಯ ಹಾಕಲು ಸ್ವಲ್ಪ ಸಮಯ ಸಿಗುತ್ತದೆ. ಮತ್ತು ನಂತರ ಮಾಡುವ ವ್ಯಾಯಾಮವು ಶಕ್ತಿಯುತ ವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ, ಇದು ಆಮ್ಲಜನಕ-ಸಮೃದ್ಧ ರಕ್ತ, ಪೋಷಕಾಂಶಗಳು ಮತ್ತು ನರರಾಸಾಯನಿಕಗಳನ್ನು ಮೆದುಳಿಗೆ ಕಳುಹಿಸುತ್ತದೆ, ಅದು ಎಲ್ಲಾ ಮಾಹಿತಿಯನ್ನು  ಲಾಕ್ ಮಾಡಲು ಸಹಾಯ ಮಾಡುತ್ತದೆ. ಆ ಸಂದರ್ಭದಲ್ಲಿ ಓದಿದ್ದೆಲ್ಲವೂ ನೆನಪಿಗೆ ಬರುತ್ತದೆ.

ವ್ಯಾಯಾಮ ಸ್ಮರಣಶಕ್ತಿಯನ್ನು ಹೇಗೆ ಹೆಚ್ಚಿಸುತ್ತವೆ:

ವಾಕಿಂಗ್, ಜಾಗಿಂಗ್, ಸೈಕ್ಲಿಂಗ್, ಡ್ಯಾನ್ಸ್‌, ಏರೋಬಿಕ್ ‌ಇತ್ಯಾದಿ ವ್ಯಾಯಾಮಗಳು ಮೆದುಳಿನಿಂದ ಪಡೆದ ನ್ಯೂರೋಟ್ರೋಫಿಕ್ ಅಂಶವಾದ ಬಿಎನ್‌ಡಿಎಫ್ (ಬ್ರೈನ್‌ ಡಿರೈವ್ಡ್‌ ನ್ಯೂರೋಟ್ರೋಫಿಕ್‌ ಪ್ಯಾಕ್ಟರ್) ಬಿಡುಗಡೆಗೆ ಕಾರಣವಾಗುತ್ತದೆ, ಇದು ಮೆದುಳಿಗೆ ಅಗತ್ಯವಾಗಿ ಬೇಕಾದಂತಹ ಪ್ರೋಟೀನ್ ಆಗಿದ್ದು, ಈ  ಬಿಎನ್‌ಡಿಎಫ್ ಹೊಸ ನರಕೋಶಗಳನ್ನು ಬೆಳೆಸಲು, ಸಂವಹನ ನಡೆಸಲು ಮತ್ತು ಬಲವಾದ ಸಿನಾಪ್ಟಿಕ್ ಬಂಧಗಳನ್ನು ರೂಪಿಸಲು ಸಹಾಯ ಮಾಡುತ್ತದೆ. ಇದು ಹೊಸ ನೆನಪುಗಳನ್ನು ಸ್ಥಿರಗೊಳಿಸುವ ಮತ್ತು ಹಿಪೊಕ್ಯಾಂಪಸ್‌ನಲ್ಲಿ ಹೊಸ ನರಕೋಶಗಳ ಜನನವನ್ನು ಉತ್ತೇಜಿಸುವ ಪ್ರಮುಖ ಸಿಗ್ನಲಿಂಗ್ ಮಾರ್ಗಗಳನ್ನು ಸಕ್ರಿಯಗೊಳಿಸುತ್ತದೆ.

ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ ನಿಯತಕಾಲಿಕೆಯಲ್ಲಿ  ಪ್ರಕಟವಾದ ಸಂಶೋಧನೆಯಲ್ಲಿ, ದೇಹದಲ್ಲಿನ ಕಡಿಮೆ ಬಿಎನ್‌ಡಿಎಫ್ ಮಟ್ಟಗಳು ಬೊಜ್ಜು, ಮಧುಮೇಹ ಮತ್ತು ಕೆಲವು ಸಂದರ್ಭಗಳಲ್ಲಿ ಹೃದ್ರೋಗಗಳಿಗೆ ಕಾರಣವಾಗುತ್ತದೆ ಎಂಬುದನ್ನು ಬಹಿರಂಗಪಡಿಸಿದೆ.  ಬಿಎನ್‌ಡಿಎಫ್ ಮಟ್ಟಗಳು ಹೆಚ್ಚಾದಾಗ, ಅದು ಹಸಿವನ್ನು ಕಡಿಮೆ ಮಾಡುತ್ತದೆ, ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಜೀವಕೋಶಗಳು ಮತ್ತು ಮೇದೋಜ್ಜೀರಕ ಗ್ರಂಥಿಯ ರಕ್ಷಿಸುತ್ತದೆ.ಈ ಬಿಎನ್‌ಡಿಎಫ್  ಮೆದುಳಿಗೆ ಮಾತ್ರ ಸೀಮಿತವಾಗಿಲ್ಲ, ಇದು ಉರಿಯೂತ, ಗ್ಲೂಕೋಸ್ ಮತ್ತು ಚಯಾಪಚಯ ಕ್ರಿಯೆಯನ್ನು ಸಹ ನಿಯಂತ್ರಿಸುತ್ತದೆ, ನಮ್ಮ ಮೆದುಳಿನ ಆರೋಗ್ಯವನ್ನು ನಮ್ಮ ಚಯಾಪಚಯ ಆರೋಗ್ಯಕ್ಕೆ ನೇರವಾಗಿ ಸಂಪರ್ಕಿಸುತ್ತದೆ. ದೇಹ ಮತ್ತು ಮನಸ್ಸಿನ ನಡುವಿನ ಸೇತುವೆಯಾಗಿರುವ ಈ ಅಂಶ ಮೆದುಳನ್ನು ಬಲಪಡಿಸುಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಓದಿದ ತಕ್ಷಣ, ಮೆದುಳು ಮಾಹಿತಿಯನ್ನು ರೆಕಾರ್ಡ್ ಮಾಡುತ್ತದೆ ಮತ್ತು ನಂತರದ ವ್ಯಾಯಾಮವು ಆ ಸಂಘಟಿತ ನೆನಪುಗಳಿಗೆ ಬಲವಾದ ಅಡಿಪಾಯವನ್ನು ನೀಡುತ್ತದೆ. ಆದರೆ ಓದಿದ 3 ರಿಂದ 4 ಗಂಟೆಯ ಬಳಿಕವೇ ವ್ಯಾಯಾಮ ಮಾಡುವುದು ಒಳ್ಳೆಯದು. ಇದು ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲ,  ಹೊಸ ಕೌಶಲ್ಯವನ್ನು ಕಲಿಯುವ, ಭಾಷೆಯನ್ನು ಕಲಿಯುವ  ಯಾರಿಗಾದರೂ ಸಹಾಯವಾಗುತ್ತದೆ.  ಪ್ರತಿದಿನ ಅಧ್ಯಯನ ಮಾಡಿದ ನಂತರ ಕೇವಲ 20 ರಿಂದ 30 ನಿಮಿಷಗಳ ವ್ಯಾಯಾಮ ಮಾಡುವುದರಿಂದ ದೇಹವನ್ನು ಬಲಪಡಿಸುವುದರ ಜೊತೆಗೆ ಮೆದುಳಿಗೆ ತರಬೇತಿ ನೀಡುವ ಮೂಲಕ ಸ್ಮರಣಶಕ್ತಿಯನ್ನು ಹೆಚ್ಚಿಸಬಹುದು. ಈ ಅಭ್ಯಾಸವು ಸ್ಮರಣೆಯನ್ನು ಹೆಚ್ಚಿಸುತ್ತದೆ, ಆಲೋಚನೆಯನ್ನು ತೀಕ್ಷ್ಣಗೊಳಿಸುತ್ತದೆ, ಜ್ಞಾನ ಮತ್ತು ಕೌಶಲ್ಯಗಳನ್ನು ವೃದ್ಧಿಸಲು ಸಹಾಯ ಮಾಡುತ್ತದೆ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries