ಕಾಸರಗೋಡು: ಶಬರಿಮಲೆ ಕ್ಷೇತ್ರದ ಚಿನ್ನವನ್ನು ಲಪಟಾಯಿಸಿದ ಎಲ್ಲಾ ಆರೋಪಿಗಳನ್ನು ಬಂಧಿಸಲು ನ್ಯಾಯಾಲಯದ ಉಸ್ತುವಾರಿಯಲ್ಲಿ ಸಿಬಿಐ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ರಾಷ್ಟ್ರೀಯ ನೇತಾರ ರಮೇಶ್ ಚೆನ್ನಿತ್ತಲ ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಶನಿವಾರ ಬೆಳಿಗ್ಗೆ ಕಾಸರಗೋಡಿಗೆ ಆಗಮಿಸಿದ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.
ಶಬರಿಮಲೆಯಿಂದ ಚಿನ್ನವನ್ನು ಕಳವುಗೈದಿರುವುದು ದೇವಸ್ವಂ ಮಂಡಳಿ ಮಾತ್ರವೆಂದು ಭಾವಿಸಲಾಗದು. ಅಂತಾರಾಷ್ಟ್ರ ನಂಟು ಹೊಂದಿರುವ ಚಿನ್ನ ಸಾಗಾಟ ಶಬರಿಮಲೆಯಲ್ಲಿ ನಡೆದಿದೆ. ಶಬರಿಮಲೆಯ ಎಲ್ಲಾ ಕಳವು ಪ್ರಕರಣಗಳು ಎಡರಂಗ ಸರ್ಕಾರದ ಕಾಲದಲ್ಲಿ ನಡೆದಿದೆ. ದೇವಸ್ವಂ ಸಚಿವರು ಹಾಗೂ ದೇವಸ್ವಂ ಅಧ್ಯಕ್ಷರು ಇದರ ಆರೋಪಿಗಳೆಂದು ರಮೇಶ್ ಚೆನ್ನಿತ್ತಲ ಆರೋಪಿಸಿದರು. ಈ ಪ್ರಕರಣವನ್ನು ಪೋಲೀಸರ ಮೂಲಕ ಮಾತ್ರ ತನಿಖೆ ನಡೆಸಿದರೆ ಸತ್ಯಾವಸ್ಥೆ ಬಹಿರಂಗಗೊಳ್ಳದೆಂದೂ ಅವರು ತಿಳಿಸಿದ್ದಾರೆ. ತಿರುವನಂತಪುರ ಮೆಡಿಕಲ್ ಕಾಲೇಜಿನಲ್ಲಿ ರೋಗಿ ಸಾವಿಗೀಡಾದ ಘಟನೆಯ ನೈತಿಕ ಹೊಣೆ ಹೊತ್ತು ಆರೋಗ್ಯ ಸಚಿವೆ ವೀಣಾ ಜೋರ್ಜ್ ರಾಜೀನಾಮೆ ನೀಡಬೇಕೆಂದು ಚೆನ್ನಿತ್ತಲ ಒತ್ತಾಯಿಸಿದ್ದಾರೆ. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಹಣ ನೀಡಿದರೆ ಮಾತ್ರವೇ ಚಿಕಿತ್ಸೆಯೆಂಬ ನೀತಿ ಅಪಾಯಕಾರಿಯಾಗಿದೆಯೆಂದು ಅವರು ತಿಳಿಸಿದರು. ಇದು ಎಡರಂಗ ಸರ್ಕಾರದ ನಂಬರ್ ವನ್ ಆರೋಗ್ಯ ಸಂರಕ್ಷಣೆ ಎಂದೂ ರಮೇಶ್ ಚೆನ್ನಿತ್ತಲ ಪ್ರಶ್ನಿಸಿದ್ದಾರೆ. ಬಿಜೆಪಿ ನೇತಾರ ಕೆ. ಸುರೇಂದ್ರನ್ ರಾಹುಲ್ ಗಾಂಧಿ ವಿರುದ್ಧ ನಡೆಸಿದ ತುಕ್ಕಡೆ, ತುಕ್ಕಡೆ ಗ್ಯಾಂಗ್ ಪದಪ್ರಯೋಗ ಸ್ವತಃ ಅಪಹಾಸ್ಯಕ್ಕೀಡಾಗುವುದಕ್ಕೆ ಸಮಾನವಾಗಿದೆಯೆಂದು ಚೆನ್ನಿತ್ತಲ ತಿಳಿಸಿದ್ದಾರೆ.





