ಕಾಸರಗೋಡು: ಕಾಸರಗೋಡು ನಗರದಲ್ಲಿ ಕಾರ್ಯವೆಸಗುತ್ತಿರುವ ಎಲ್ಲಾ ವ್ಯಾಪಾರ ಸಂಸ್ಥೆಗಳು ಹಾಗೂ ಕಚೇರಿಗಳಲ್ಲಿ ಅಗ್ನಿಶಾಮಕದಳ ಪರಿಶೀಲನೆ ಆರಂಭಿಸಿದೆ. ಅಗ್ನಿ ಸುರಕ್ಷಾ ಸೌಕರ್ಯಗಳನ್ನು ಏರ್ಪಡಿಸದ ವ್ಯಾಪಾರ ಸಂಸ್ಥೆಗಳು ಮತ್ತು ಕಚೇರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಮದು ಸೂಚಿಸಲಾಗಿದೆ.
ಅಕ್ಟೋಬರ್ 9 ರಂದು ತಳಿಪರಂಬದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಡವೊಂದರಲ್ಲಿ ಉಂಟಾದ ಭೀಕರ ಅಗ್ನಿಬಾಧೆಯ ಹಿನ್ನೆಲೆಯಲ್ಲಿ ಅಗ್ನಿಶಾಮಕದಳ ನಗರದಲ್ಲಿ ಇಂತಹ ಕಾರ್ಯಾಚರಣೆ ಆರಂಭಿಸಿದೆ. ಅಗ್ನಿ ಅನಾಹುತ ಉಂಟಾಗುವುದನ್ನು ತಡೆಗಟ್ಟಲು ಎಲ್ಲಾ ಸಂಸ್ಥೆಗಳಲ್ಲಿ ಅಗತ್ಯದ ಅಗ್ನಿ ಸುರಕ್ಷಾ ಸೌಕರ್ಯಗಳನ್ನು ಏರ್ಪಡಿಸಬೇಕು. ಅಂತಹ ಸೌಕರ್ಯಗಳು ಇಲ್ಲದೇ ಇರುವ ಸಂಸ್ಥೆಗಳಿಗೆ ನೋಟೀಸು ಜಾರಿಗೊಳಿಸಲಾಗುವುದು. ಅದು ಲಭಿಸಿದ 15 ದಿನಗಳೊಳಗೆ ಅಗ್ನಿ ಸುರಕ್ಷಾ ಸೌಕರ್ಯಗಳನ್ನು ಏರ್ಪಡಿಸಲಾಗಿದೆಯೆಂಬುವುದನ್ನು ಅಂತಹ ಸಂಸ್ಥೆಗಳು ಅಗ್ನಿಶಾಮಕದಳಕ್ಕೆ ಲಿಖಿತರೂಪದಲ್ಲಿ ತಿಳಿಸಬೇಕು. ಈ ಅವಧಿಯೊಳಗಾಗಿ ಅಗತ್ಯದ ಕ್ರಮ ಕೈಗೊಳ್ಳದಿದ್ದಲ್ಲಿ ಅಂತಹ ಸಂಸ್ಥೆಗಳ ವಿರುದ್ಧ ಮುಂದೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದೆಂದು ಅಗ್ನಿಶಾಮಕದಳದ ಅಧಿಕಾರಿಗಳು ತಿಳಿಸಿದ್ದಾರೆ. ಇದರಂತೆ ಎಲ್ಲಾ ಅಂಗಡಿಗಳು ಮತ್ತು ಕಚೇರಿಗಳಲ್ಲಿ ಫಯರ್ ಎಸ್ಟಿಂಗ್ವಿಷರ್‍ಗಳನ್ನು ಸ್ಥಾಪಿಸಬೇಕಲ್ಲದೆ ಅಗ್ನಿಬಾಧೆ ತಡೆಗಟ್ಟುವ ಇತರ ಅಗತ್ಯದ ಸೌಕರ್ಯಗಳನ್ನು ಏರ್ಪಡಿಸಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ. ಬಹುಮಹಡಿ ಕಟ್ಟಡಗಳಲ್ಲಿ ಫಯರ್ ಹೆಡೆಂಟ್‍ನ್ನು ಸ್ಥಾಪಿಸಬೇಕು ಎಂದು ಅವರು ಹೇಳಿದ್ದಾರೆ.




