ನ್ಯೂಯಾರ್ಕ್: ಅಮೆರಿಕದಲ್ಲಿ ಮಂಗಳವಾರ ನಡೆಯುವ ಚುನಾವಣೆಯಲ್ಲಿ ಮತದಾರರು ನ್ಯೂಯಾರ್ಕ್ ಮೇಯರ್ ಹಾಗೂ ವರ್ಜೀನಿಯಾ ಗವರ್ನರ್ ಸೇರಿದಂತೆ ಹಲವು ಪ್ರಮುಖ ಹುದ್ದೆಗಳಿಗೆ ಆಯ್ಕೆ ಮಾಡಲಿದ್ದಾರೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ನಡೆಯುತ್ತಿರುವ ಈ ಚುನಾವಣೆಯಲ್ಲಿ ಸರ್ಕಾರದ ಬಗೆಗಿನ ಮತದಾರರ ಭಾವನೆಗಳೇನು ಎಂಬ ಅಂಶ ಬೆಳಕಿಗೆ ಬರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಬಾರಿ ನ್ಯೂಯಾರ್ಕ್, ಮಿನ್ನಿಯಾಪೊಲೀಸ್, ಸಿಯಾಟೆಲ್ ಮತ್ತು ಡೆಟ್ರಾಯಿಟ್ ಮೇಯರ್ ಹುದ್ದೆಗಳಿಗೆ ಚುನಾವಣೆ ನಡೆಯುತ್ತಿದೆ. ಮಾಜಿ ಗವರ್ನರ್ ಆಯಂಡ್ರೂ ಕ್ಯೂಮೊ ವಿರುದ್ಧ ಅಚ್ಚರಿಯ ಪ್ರಾಥಮಿಕ ವಿಜಯ ಸಾಧಿಸಿರುವ ಡೆಮಾಕ್ರಟಿಕ್ ಸೋಶಲಿಸ್ಟ್ ಅಭ್ಯರ್ಥಿ 33 ವರ್ಷದ ಜೊಹ್ರಾನ್ ಮಮ್ದಾನಿಯವರ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಸ್ವತಂತ್ರ ಅಭ್ಯರ್ಥಿಯಾಗಿ ಕ್ಯೂಮೊ ಕಣದಲ್ಲಿದ್ದು, ಗೆಲುವಿನ ಓಟದಲ್ಲಿದ್ದರೂ, ಸಮೀಕ್ಷೆಗಳಲ್ಲಿ ಭಾರಿ ಹಿನ್ನಡೆ ಕಂಡಿದ್ದಾರೆ. ದೇಶದ ಪ್ರಮುಖ ನಾಯಕರಾಗಿ ಮಮ್ದಾನಿಯವರ ವಿಕಾಸ ಅಚ್ಚರಿ ಮೂಡಿಸಿದೆ ಹಾಗೂ ಪ್ರಗತಿಪರರು ಮತ್ತು ಸಂಪ್ರದಾಯವಾದಿಗಳ ನಡುವಿನ ವಿಸ್ತೃತ ಚರ್ಚೆಗೆ ಕಾರಣವಾಗಿದೆ.
ಮಿನ್ನಿಯಾಪೊಲೀಸ್ ನಲ್ಲಿ ಮೇಯರ್ ಜಾಕೋಬ್ ಫ್ರೇ ಅವರು ಡೆಮಾಕ್ರಟಿಕ್ ಸೋಶಲಿಸ್ಟ್ ಒಮರ್ ಫತ್ಹೇ ಅವರಿಂದ ಸವಾಲು ಎದುರಿಸುತ್ತಿದ್ದಾರೆ. ಸಿಯಾಟೆಲ್ ಮೇಯರ್ ಮಂದಗಾಮಿ ಗುಂಪಿನ ಬ್ರೂಸ್ ಹರೆಲ್ ಅವರು ಪ್ರಗತಿಪರ ಸಮುದಾಯ ಸಂಘಟಕ ಕೀಟ್ ವಿಲ್ಸನ್ ಅವರಿಂದ ತುರುಸಿನ ಸ್ಪರ್ಧೆ ಎದುರಿಸುತ್ತಿದ್ದು, ಡೆಟ್ರಾಯಿಟ್ ನಲ್ಲಿ ಮೇರಿ ಶೆಫೀಲ್ಡ್ ಮತ್ತು ಸೊಲೊಮನ್ ಕಿನ್ಲಾಚ್ ಜೂನಿಯರ್ ಕಣದಲ್ಲಿದ್ದಾರೆ.
ಎರಡು ರಾಜ್ಯಗಳ ಗವರ್ನರ್ ಹುದ್ದೆಗಳಿಗೂ ಚುನಾವಣೆ ನಡೆಯುತ್ತಿದ್ದು, ವರ್ಜೀನಿಯಾದಲ್ಲಿ ರಿಪಬ್ಲಿಕನ್ ಗವರ್ನರ್ ಗ್ಲೆನ್ ಯಂಗ್ಕ ಕಿನ್ ಅವರ ಅವಧಿ ಮುಗಿಯುತ್ತಿದೆ. ಅವರ ಹುದ್ದೆಗೆ ಡೆಮಾಕ್ರಟಿಕ್ ಅಭ್ಯರ್ಥಿಯಾಗಿ ಅಬಿಜೈಲ್ ಸ್ಪನ್ ಬರ್ಗರ್ ಮತ್ತು ರಿಪಬ್ಲಿಕನ್ ವಿಲ್ಸಮ್ ಎರ್ಲ್ ಸೆರ್ಸ್ ಕಣದಲ್ಲಿದ್ದಾರೆ.
ನ್ಯೂಜೆರ್ಸಿಯಲ್ಲಿ ಡೆಮಾಕ್ರಟಿಕ್ ಪ್ರತಿನಿಧಿ ಮೈಕ್ ಶೆರಿಲ್ ಅವರು ಗವರ್ನರ್ ಹುದ್ದೆಯನ್ನು ಪಕ್ಷದ ಕೈಯಲ್ಲೇ ಉಳಿಸಿಕೊಳ್ಳಲು ಹೋರಾಡುತ್ತಿದ್ದು, ಅವರಿಗೆ ಫಿಲ್ ಮರ್ಫಿಯವರಿಂದ ತೆರವಾಗುವ ಸ್ಥಾನಕ್ಕೆ ರಿಪಬ್ಲಿಕನ್ ಸ್ಟೇಟ್ ಅಸೆಂಬ್ಲಿ ಪ್ರತಿನಿಧಿ ಜ್ಯಾಕ್ ಸಿಯಾಟ್ರೆಲಿ ಎದುರಾಳಿ.




