HEALTH TIPS

ಔಷಧಗಳ ಅತಿಬಳಕೆಯಿಂದ ದೇಶದಲ್ಲಿ ಪ್ರತಿ ವಾರ 12 ಮಂದಿ ಮೃತ್ಯು : ಎನ್‍ಸಿಆರ್‌ಬಿ ಅಂಕಿ ಅಂಶ

ನವದೆಹಲಿ: ದೇಶದಲ್ಲಿ ಔಷಧಗಳ ಅತಿ ಬಳಕೆಯಿಂದ (ಓವರ್‌ಡೋಸ್) ಪ್ರತಿ ವಾರ ಕನಿಷ್ಠ 12 ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ ಎನ್ನುವ ಅಂಶ ಎನ್‍ಸಿಆರ್‌ಬಿ ಅಂಕಿ ಅಂಶಗಳಿಂದ ಬಹಿರಂಗವಾಗಿದೆ. ಅಂದರೆ ದಿನಕ್ಕೆ ಸುಮಾರು ಎರಡು ಮಂದಿಯನ್ನು ಔಷಧಗಳ ಅತಿಬಳಕೆ ಬಲಿ ಪಡೆಯುತ್ತಿದೆ.

2019 ರಿಂದ 2023ರ ನಡುವೆ ಈ ಕಾರಣದಿಂದ 3290 ಮಂದಿ ಮೃತಪಟ್ಟಿದ್ದಾರೆ. ಐದು ವರ್ಷಗಳ ಅವಧಿಯಲ್ಲಿ ದಾಖಲಾದಷ್ಟೇ ಸರಾಸರಿ ಪ್ರಕರಣಗಳು 2023ರಲ್ಲಿ ಕೂಡಾ ದಾಖಲಾಗಿವೆ.

ಆದರೆ ಮಾದಕ ವ್ಯಸನದಿಂದ ಆಗಿರುವ ಸಾವು ಮತ್ತು ವೈದ್ಯರು ಶಿಫಾರಸ್ಸು ಮಾಡಿದ ಔಷಧಗಳ ಅತಿಬಳಕೆಯೇ ಎನ್ನುವುದು ಎನ್‍ಸಿಆರ್‌ಬಿ ಅಂಕಿ ಅಂಶಗಳಲ್ಲಿ ಸ್ಪಷ್ಟವಾಗಿಲ್ಲ.

ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ವೈದ್ಯರು, ವೈದ್ಯಕೀಯ ತಜ್ಞರು ಮತ್ತು ನಿವೃತ್ತ ಪೊಲೀಸ್ ಅಧಿಕಾರಿಗಳು, ಔಷಧಗಳ ಅತಿಬಳಕೆ ಪ್ರಕರಣಗಳ ವರ್ಗೀಕರಣ ಅಗತ್ಯ ಎಂದು ಪ್ರತಿಪಾದಿಸಿದ್ದಾರೆ. ವೈದ್ಯರು ಶಿಫಾರಸ್ಸು ಮಾಡಿದ ನಿದ್ರಾಗುಳಿಗೆಗಳು ಮತ್ತು ನೋವು ನಿವಾರಕ ಔಷಧಿಗಳು ಈ ಪೈಕಿ ಬಹುತೇಕ ಸಾವುಗಳಿಗೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸಿದ್ದಾರೆ.

ದೇಶದಲ್ಲಿ 2019ರಲ್ಲಿ 705, 2020ರಲ್ಲಿ 514 ಸಾವುಗಳು ಈ ಕಾರಣದಿಂದ ಸಂಭವಿಸಿವೆ. ಬಹುಶಃ ಕೋವಿಡ್ ಕಾರಣದಿಂದ ವಿಧಿಸಲ್ಪಟ್ಟ ಲಾಕ್‍ಡೌನ್‍ನಿಂದಾಗಿ 2020ರಲ್ಲಿ ಸಾವಿನ ಸಂಖ್ಯೆ ಕಡಿಮೆಯಾಗಿರುವ ಸಾಧ್ಯತೆ ಇದೆ. 2021ರಲ್ಲಿ 737, 2022ರಲ್ಲಿ 681 ಮತ್ತು 2023ರಲ್ಲಿ 654 ಪ್ರಕರಣಗಳು ವರದಿಯಾಗಿವೆ.

ತಮಿಳುನಾಡಿನಲ್ಲಿ ಅತಿಹೆಚ್ಚು ಇಂಥ ಪ್ರಕರಣಗಳು ದಾಖಲಾಗಿದ್ದು, 2019ರಲ್ಲಿ 108 ಮಂದಿ ಈ ಕಾರಣದಿಂದ ಮೃತಪಟ್ಟಿದ್ದಾರೆ. 2020ರಲ್ಲಿ 110 ಮಂದಿ ಹಾಗೂ 2021ರಲ್ಲಿ 250 ಮಂದಿಯ ಸಾವಿಗೆ ಔಷಧಗಳ ಅತಿಬಳಕೆ ಕಾರಣವಾಗಿದೆ. ಆದರೆ 2022 ಮತ್ತು 2023ರಲ್ಲಿ ಈ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದು, ಕ್ರಮವಾಗಿ 50 ಮತ್ತು 65 ಪ್ರಕರಣಗಳು ಸಂಭವಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries