HEALTH TIPS

ಎಸ್‌ಐಆರ್ ಮೂಲಕ ಮತಗಳ್ಳತನವನ್ನು ಮರೆ ಮಾಚಲಾಗುತ್ತಿದೆ : ರಾಹುಲ್ ಗಾಂಧಿ ಆರೋಪ

ಭೋಪಾಲ್‌: ಹಲವಾರು ರಾಜ್ಯಗಳಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಮೂಲಕ 'ಮತಗಳ್ಳತನ'ವನ್ನು ಔಪಚಾರಿಕಗೊಳಿಸಲು ಚುನಾವಣಾ ಆಯೋಗ ಮತ್ತು ಬಿಜೆಪಿ ಪ್ರಯತ್ನಿಸುತ್ತಿವೆ ಎಂದು ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ರವಿವಾರ ಆರೋಪಿಸಿದರು.

ಮಧ್ಯಪ್ರದೇಶ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗಾಗಿ ಆಯೋಜಿಸಲಾದ ತರಬೇತಿ ಶಿಬಿರದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ನ.4ರಿಂದ ಒಂಭತ್ತು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆರಂಭಿಸಲಾಗಿರುವ ಎಸ್‌ಐಆರ್ ಪ್ರಕ್ರಿಯೆಯು ಮತದಾರರ ಪಟ್ಟಿಗಳಲ್ಲಿನ ಭಾರೀ ಪ್ರಮಾಣದ ಅಕ್ರಮಗಳನ್ನು ಮರೆಮಾಚುವ ಉದ್ದೇಶಪೂರ್ವಕ ಯತ್ನವಾಗಿದೆ ಎಂದು ಪ್ರತಿಪಾದಿಸಿದರು.

ಮತಗಳ್ಳತನ ಸಮಸ್ಯೆ ಒಂದು ರಾಜ್ಯಕ್ಕೆ ಸೀಮಿತಗೊಂಡಿಲ್ಲ. ಹರ್ಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಛತ್ತೀಸ್‌ಗಡಗಳಲ್ಲಿಯೂ ಮತದಾರರ ಪಟ್ಟಿಗಳಲ್ಲಿ ಇದೇ ರೀತಿಯ ಅಕ್ರಮಗಳು ನಡೆದಿವೆ ಎಂದರು.

'ಕೆಲವು ದಿನಗಳ ಹಿಂದೆ ಹರ್ಯಾಣದಲ್ಲಿ ಮತಗಳ್ಳತನದ ಬಗ್ಗೆ ಪುರಾವೆಗಳನ್ನು ನಾನು ಪ್ರಸ್ತುತಪಡಿಸಿದ್ದೆ. ಸುಮಾರು 25 ಲಕ್ಷ ಮತಗಳನ್ನು, ಸರಿಸುಮಾರು ಪ್ರತಿ ಎಂಟರಲ್ಲಿ ಒಂದು ಮತವನ್ನು ಕಳವು ಮಾಡಲಾಗಿದೆ ಎನ್ನುವುದನ್ನು ದತ್ತಾಂಶಗಳು ಸ್ಪಷ್ಟವಾಗಿ ತೋರಿಸಿವೆ. ದತ್ತಾಂಶಗಳನ್ನು ಪರಿಶೀಲಿಸಿದ ಬಳಿಕ ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಛತ್ತೀಸ್‌ಗಡಗಳಲ್ಲಿಯೂ ಇಂತಹುದೇ ಅಕ್ರಮ ನಡೆದಿದೆ ಎನ್ನುವುದು ನನಗೆ ಖಚಿತವಾಗಿದೆ. ಇದು ಬಿಜೆಪಿ ಮತ್ತು ಚುನಾವಣಾ ಆಯೋಗದ ವ್ಯವಸ್ಥಿತ ವಂಚನೆಯ ಭಾಗವಾಗಿದೆ' ಎಂದರು.

'ಮತದಾರರ ಪಟ್ಟಿಗಳಲ್ಲಿನ ವ್ಯತ್ಯಾಸಗಳ ಬಗ್ಗೆ ಕಾಂಗ್ರೆಸ್ ಪಕ್ಷವು ವ್ಯಾಪಕ ಪುರಾವೆಗಳನ್ನು ಸಂಗ್ರಹಿಸಿದೆ ಮತ್ತು ಹಂತ ಹಂತವಾಗಿ ಮಾಹಿತಿಯನ್ನು ಬಿಡುಗಡೆ ಮಾಡಲಿದೆ. ನಾವು ಈವರೆಗೆ ತೋರಿಸಿರುವುದು ಒಂದು ಸಣ್ಣ ಭಾಗ ಮಾತ್ರ' ಎಂದು ತಿಳಿಸಿದ ರಾಹುಲ್ ಗಾಂಧಿ, ಪ್ರಜಾಪ್ರಭುತ್ವ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ನೇರ ದಾಳಿಗೆ ಒಳಗಾಗಿವೆ. ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರು ಎಲ್ಲರೂ ಇದರಲ್ಲಿ ಶಾಮೀಲಾಗಿದ್ದಾರೆ,ಇದರಿಂದಾಗಿ ಭಾರತ ಮಾತೆಗೆ ಹಾನಿಯಾಗುತ್ತಿದೆ ಎಂದು ಹೇಳಿದರು.

ಮತಗಳ್ಳತನದ ವಿರುದ್ಧ ತನ್ನ ಅಭಿಯಾನವು ಮುಂದುವರಿಯುತ್ತದೆ ಮತ್ತು ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವಕ್ಕಾಗಿ ಒತ್ತಾಯಿಸುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries