HEALTH TIPS

ಅಮೆರಿಕದ ನಿರ್ಬಂಧಗಳ ನಡುವೆ ರಷ್ಯಾದಿಂದ ಕಚ್ಚಾತೈಲದ ನೇರ ಆಮದುಗಳನ್ನು ತಗ್ಗಿಸಲು ಭಾರತ ಸಜ್ಜು

ನವದೆಹಲಿ: ಅಮೆರಿಕವು ನ.21ರಿಂದ ಜಾರಿಯಾಗುವಂತೆ ರೋಸ್ನೆಫ್ಟ್ ಮತ್ತು ಲುಕೊಯಿಲ್ ಮೇಲೆ ಹೊಸ ನಿರ್ಬಂಧಗಳನ್ನು ಹೇರಿದ ಬಳಿಕ ನವಂಬರ್ ಅಂತ್ಯದಿಂದ ರಷ್ಯಾದಿಂದ ಕಚ್ಚಾತೈಲದ ನೇರ ಆಮದುಗಳನ್ನು ಕಡಿಮೆ ಮಾಡಲು ಭಾರತವು ಸಜ್ಜಾಗಿದೆ.

ಭಾರತಕ್ಕೆ ಆಮದಾಗುವ ರಷ್ಯಾದ ಕಚ್ಚಾತೈಲದಲ್ಲಿ ಅರ್ಧಕ್ಕೂ ಹೆಚ್ಚಿನ ಪಾಲನ್ನು ಹೊಂದಿರುವ ದೇಶದಲ್ಲಿಯ ಸಂಸ್ಕರಣಾಗಾರಗಳು ರಷ್ಯಾದ ಎರಡು ಬೃಹತ್ ತೈಲ ರಫ್ತು ಕಂಪನಿಗಳ ಮೇಲಿನ ಇತ್ತೀಚಿನ ನಿರ್ಬಂಧಗಳನ್ನು ಪಾಲಿಸುವ ನಿರೀಕ್ಷೆಯಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಈ ಸಂಸ್ಕರಣಾಗಾರಗಳು ಕಚ್ಚಾತೈಲವನ್ನು ಪೆಟ್ರೋಲ್ ಮತ್ತು ಡೀಸೆಲ್ನಂತಹ ಇಂಧನಗಳಾಗಿ ಪರಿವರ್ತಿಸುತ್ತವೆ.

ಕಡಲ ಗುಪ್ತಚರ ಸಂಸ್ಥೆ ಕೆಪ್ಲರ್ ಪ್ರಕಾರ ಇದು ಡಿಸೆಂಬರ್ನಲ್ಲಿ ರಷ್ಯಾದಿಂದ ಆಮದುಗಳ ತೀವ್ರ ಕುಸಿತಕ್ಕೆ ಕಾರಣವಾಗಲಿದ್ದು, ಮಧ್ಯವರ್ತಿಗಳು ಮತ್ತು ಪರ್ಯಾಯ ಮಾರ್ಗಗಳ ಮೂಲಕ 2026ರ ಆರಂಭದಲ್ಲಿ ಕ್ರಮೇಣ ಚೇತರಿಸಿಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ.

ರೋಸ್ನೆಫ್ಟ್ನೊಂದಿಗೆ ದೀರ್ಘಾವಧಿಯ ಪೂರೈಕೆ ಒಪ್ಪಂದವನ್ನು ಹೊಂದಿರುವ ಅಗ್ರ ಆಮದುದಾರ ರಿಲಯನ್ಸ್ ಇಂಡಸ್ಟ್ರೀಸ್ ಲಿ.ರಷ್ಯಾದಿಂದ ಕಚ್ಚಾತೈಲ ಆಮದನ್ನು ನಿಲ್ಲಿಸಲಿದೆ. ರಷ್ಯಾದಿಂದ ತೈಲ ಆಮದನ್ನು ನಿಲ್ಲಿಸುವುದಾಗಿ ಇತರ ಎರಡು ಸರಕಾರಿ ನಿಯಂತ್ರಣದಲ್ಲಿರುವ ತೈಲ ಸಂಸ್ಕರಣಾಗಾರಗಳೂ ತಿಳಿಸಿವೆ.

ಮಂಗಳೂರು ರಿಫೈನರಿಸ್ ಆಯಂಡ್ ಪೆಟ್ರೋಕೆಮಿಕಲ್ಸ್ ಲಿ. ಹಾಗೂ ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರ ಮಿತ್ತಲ್ ಎನರ್ಜಿ ಮತ್ತು ಹಿಂದುಸ್ಥಾನ ಪೆಟ್ರೋಲಿಯಂ ಕಾರ್ಪೊರೇಷನ್ ಲಿ.ನ(ಎಚ್ಪಿಸಿಎಲ್) ಜಂಟಿ ಉದ್ಯಮವಾಗಿರುವ ಎಚ್ಪಿಸಿಎಲ್-ಮಿತ್ತಲ್ ಎನರ್ಜಿ ಲಿ.ಭವಿಷ್ಯದ ತೈಲ ಆಮದುಗಳನ್ನು ಸ್ಥಗಿತಗೊಳಿಸುವ ಯೋಜನೆಗಳನ್ನು ಪ್ರಕಟಿಸಿವೆ.

2025ರ ಪೂರ್ವಾರ್ಧದಲ್ಲಿ ದಿನವೊಂದಕ್ಕೆ 1.8 ಮಿಲಿಯನ್ ಬ್ಯಾರೆಲ್ ರಷ್ಯಾದ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳಲಾಗಿದ್ದು, ಇದರಲ್ಲಿ ಈ ಮೂರು ಸಂಸ್ಥೆಗಳು ಅರ್ಧಕ್ಕೂ ಹೆಚ್ಚಿನ ಪಾಲು ಹೊಂದಿದ್ದವು.

ಆದರೆ, ರೋಸ್ನೆಫ್ಟ್ನ ಭಾಗಶಃ ಒಡೆತನದಲ್ಲಿರುವ ಮತ್ತು ಈಗಾಗಲೇ ಐರೋಪ್ಯ ಒಕ್ಕೂಟದ ನಿರ್ಬಂಧಗಳಡಿ ಇರುವ ನಯಾರಾ ಎನರ್ಜಿಯ ವಾದಿನಾರ್ ರಿಫೈನರಿಯು ರಷ್ಯಾದಿಂದ ಕಚ್ಚಾತೈಲ ಆಮದನ್ನು ಮುಂದುವರಿಸುವ ಸಾಧ್ಯತೆಯಿದೆ.

ಕೆಪ್ಲರ್ನ ಪ್ರಮುಖ ಸಂಶೋಧನಾ ವಿಶ್ಲೇಷಕ ಸುಮಿತ್ ರಿತೋಲಿಯಾ ಪ್ರಕಾರ,ಅಕ್ಟೋಬರ್ನಲ್ಲಿ ರಷ್ಯಾ ಭಾರತಕ್ಕೆ ಅಗ್ರ ಕಚ್ಚಾ ತೈಲ ಪೂರೈಕೆದಾರನ ಸ್ಥಾನವನ್ನು ಕಾಯ್ದುಕೊಂಡಿತ್ತು. ನಂತರದ ಸ್ಥಾನಗಳಲ್ಲಿ ಇರಾಕ್ ಮತ್ತು ಸೌದಿ ಅರೇಬಿಯಗಳಿದ್ದವು. ನಿರ್ಬಂಧಗಳಿಗೆ ಮುನ್ನ ಭಾರತಕ್ಕೆ ರಷ್ಯಾದ ಕಚ್ಚಾತೈಲ ಆಮದುಗಳು ದಿನವೊಂದಕ್ಕೆ 1.6-1.8 ಮಿಲಿಯನ್ ಬ್ಯಾರೆಲ್‌ ಗಳನ್ನು ತಲುಪಿದ್ದವು ಮತ್ತು ಸಂಸ್ಕರಣಾಗಾರಗಳು ಅಮೆರಿಕದ ನಿರ್ಬಂಧಗಳಿಗೆ ಗುರಿಯಾಗುವ ಸಾಧ್ಯತೆಯನ್ನು ತಪ್ಪಿಸಲು ಮುಂದಾಗಿದ್ದರಿಂದ ಅ.21ರ ಬಳಿಕ ಆಮದುಗಳಲ್ಲಿ ಕುಸಿತ ಕಂಡು ಬಂದಿತ್ತು.

ರಷ್ಯಾದಿಂದ ಆಮದುಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆಯಿಲ್ಲ. ಆದರೆ ಭವಿಷ್ಯದ ಆಮದುಗಳು ಹೆಚ್ಚು ಸಂಕೀರ್ಣವಾದ ಲಾಜಿಸ್ಟಿಕ್ಗಳು ಮತ್ತು ವ್ಯಾಪಾರ ವ್ಯವಸ್ಥೆಗಳನ್ನು ಅವಲಂಬಿಸಿರಲಿವೆ ಎಂದು ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.

ರಷ್ಯಾದಿಂದ ಕಚ್ಚಾತೈಲ ಆಮದುಗಳಲ್ಲಿ ಕಡಿತವನ್ನು ಸರಿದೂಗಿಸಲು ಭಾರತೀಯ ಸಂಸ್ಕರಣಾಗಾರಗಳು ಮಧ್ಯಪ್ರಾಚ್ಯ, ಲ್ಯಾಟಿನ್ ಅಮೆರಿಕ,ಪಶ್ಚಿಮ ಆಫ್ರಿಕಾ,ಕೆನಡಾ ಮತ್ತು ಅಮೆರಿಕದಿಂದ ತೈಲ ಖರೀದಿಯನ್ನು ಹೆಚ್ಚಿಸುತ್ತಿವೆ. ಅಮೆರಿಕದಿಂದ ಕಚ್ಚಾತೈಲ ಆಮದು ಅಕ್ಟೋಬರ್ನಲ್ಲಿ ದಿನವೊಂದಕ್ಕೆ 5,68,000 ಬ್ಯಾರೆಲ್ ಗೆ ತಲುಪಿದ್ದು,ಇದು ಮಾರ್ಚ್ 2021ರ ನಂತರ ಗರಿಷ್ಠ ಪ್ರಮಾಣವಾಗಿದೆ. ಇದಕ್ಕೆ ನಿರ್ಬಂಧಗಳಿಗಿಂತ ಆರ್ಥಿಕ ಅಂಶಗಳು ಹೆಚ್ಚು ಕಾರಣವಾಗಿವೆ. ಡಿಸೆಂಬರ್ ಮತ್ತು ಜನವರಿಯಲ್ಲಿ ಅಮೆರಿಕದಿಂದ ತೈಲ ಆಮದು ದಿನವೊಂದಕ್ಕೆ 2,50,000-3,50,000 ಬ್ಯಾರೆಲ್‌ ಗಳ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆಯಿದೆ ಎಂದು ರಿತೋಲಿಯಾ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries