ಕಾಸರಗೋಡು: ಜಿಲ್ಲೆಯ ಎರಡು ಪಂಚಾಯಿತಿಗಳಾದ ಚೆಮ್ನಾಡ್ ಮತ್ತು ಬೇಡಡ್ಕ ಮಧ್ಯೆ ಸಂಪರ್ಕಿಸುವ ಮುನಾಂಬ ಸೇತುವೆಗೆ ಶಿಲಾನ್ಯಾಸವನ್ನು ಲೋಕೋಪಯೋಗಿ ಮತ್ತು ಪ್ರವಾಸೋದ್ಯಮ ಸಚಿವ ಪಿ.ಎ. ಮುಹಮ್ಮದ್ ರಿಯಾಜ್ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಅವರು ಸೇತುವೆ ಪೂರ್ಣಗೊಂಡ ನಂತರ, ಕಾಸರಗೋಡಿನಿಂದ ರಾಷ್ಟ್ರೀಯ ಹೆದ್ದಾರಿಯ ಮೂಲಕ ಕುಂಡಂಗುಳಿ ತಲುಪಲು ಅತಿ ಸನಿಹ ಹಾದಿ ಇದಾಗಲಿದೆ. ಉದುಮ ಕ್ಷೇತ್ರವು ರಸ್ತೆ ಮತ್ತು ಸೇತುವೆಗಳ ನಿರ್ಮಾಣದ ಮೂಲಕ ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿದ ಕ್ಷೇತ್ರವಾಗಿ ಬದಲಾಗಿದೆ ಎಂದು ಸಚಿವರು ತಿಳಿಸಿದರು.
17.70 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಲಿದೆ. ಒಟ್ಟು 198 ಮೀಟರ್ ಉದ್ದ, 11 ಮೀಟರ್ ಅಗಲ ಮತ್ತು ಎರಡೂ ಬದಿಗಳಲ್ಲಿ ಪಾದಚಾರಿ ಮಾರ್ಗ ಹೊಂದಿರುವ ಸೇತುವೆ 26 ಮೀಟರ್ ಉದ್ದದ ಐದು ಸ್ಪ್ಯಾನ್ ಹಾಗೂ 10 ಮೀಟರ್ ಉದ್ದದ ಆರು ಸ್ಪ್ಯಾನ್‍ಗಳು ಹಾಗೂ ಎರಡೂ ಪಾಶ್ರ್ವದಲ್ಲಿ 80 ಮೀಟರ್ ಸಂಪರ್ಕ ರಸ್ತೆಯನ್ನು ಹೊಂದಿದೆ. ಪ್ರಸಕ್ತ ಪಯಸ್ವಿನಿ ನದಿ ಮತ್ತು ಕರಿಚ್ಚೇರಿ ನದಿಯ ಸಂಗಮ ಸ್ಥಳವಾದ ಮುನಾಂಬದಲ್ಲಿ ಎರಡು ಪಂಚಾಯಿತಿಗಳ ಎರಡು ಗ್ರಾಮಗಳನ್ನು ಸಂಪರ್ಕಿಸುವ ಒಂದೇ ಒಂದು ತೂಗು ಸೇತುವೆ ಇದ್ದು, ಮುನಾಂಬ ಸೇತುವೆ ಪೂರ್ಣಗೊಂಡ ನಂತರ, ಎರಡೂ ಪ್ರದೇಶದ ಜನತೆ ದೀರ್ಘ ಕಾಲದಿಂದ ಎದುರಿಸುತ್ತಿರುವ ಪ್ರಯಾಣ ಸಮಸ್ಯೆಗೆ ಪರಿಹಾರ ಲಭ್ಯವಾಘಲಿದೆ.
ಶಾಸಕ ಸಿ.ಎಚ್.ಕುಂಜಂಬು ಶಾಸಕ ಅಧ್ಯಕ್ಷತೆ ವಹಿಸಿದ್ದರು. ಲೋಕೋಪಯೋಗಿ ಇಲಾಖೆಯ ಉತ್ತರ ವಲಯ ಸೂಪರಿಂಟೆಂಡಿಂಗ್ ಎಂಜಿನಿಯರ್ ಇ.ಜಿ.ವಿಶ್ವಪ್ರಕಾಶ್ ವರದಿ ವಾಚಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಮಾಜಿ ಶಾಸಕ ಕೆ.ಕುಞÂರಾಮನ್, ಶಾಸಕ ಎಂ.ರಾಜಗೋಪಾಲನ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು, ಬೇಡಡ್ಕ ಗ್ರಾ.ಪಂ ಅಧ್ಯಕ್ಷೆ ಎಂ.ಧನ್ಯ, ಗ್ರಾಪಂ ಸದಸ್ಯೆ ವಸಂತ ಕುಮಾರಿ, ಚೆಮ್ನಾಡು ಗ್ರಾಪಂ ಸದಸ್ಯೆ ರಮಾ ಗಂಗಾಧರನ್, ಡಿಪಿಸಿ ಸರ್ಕಾರದ ನಾಮನಿರ್ದೇಶಿತ ಸದಸ್ಯ ಸಿ.ರಾಮಚಂದ್ರನ್, ರಾಜಕೀಯ ಪಕ್ಷದ ಪ್ರತಿನಿಧಿಗಳು ಉಪಸ್ಥಿತರಿದ್ದರು. ಇ.ಜಿ. ವಿಶ್ವಪ್ರಕಾಶ್ ಸ್ವಾಗತಿಸಿದರು. ಸೇತುವೆ ಕಣ್ಣೂರು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಎಂ. ಸಜಿತ್ ವಂದಿಸಿದರು.





