ಕುಂಬಳೆ: ರಾಜ್ಯದ ಸ್ವಚ್ಛತಾ ಚಟುವಟಿಕೆಗಳಲ್ಲಿ ಹಸಿರು ಕ್ರಿಯಾಸೇನೆಯ ಪಾತ್ರ ಹಿರಿದಾದುದು ಎಂದು ಸ್ಥಳೀಯಾಡಳಿತ, ಅಬಕಾರಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಂ.ಬಿ. ರಾಜೇಶ್ ಹೇಳಿದರು.
ಅನಂತಪುರದಲ್ಲಿ ಕ್ಲೀನ್ ಕೇರಳ ಕಂಪನಿ ಲಿಮಿಟೆಡ್‍ನ ಗ್ರೀನ್ ಪಾರ್ಕ್ ಅನ್ನು ಉದ್ಘಾಟಿಸಿದ ಬಳಿಕ ಸಚಿವರು ಆನ್‍ಲೈನ್‍ನಲ್ಲಿ ಮಾತನಾಡುತ್ತಿದ್ದರು.
ಹಸಿರು ಕ್ರಿಯಾಸೇನೆಯ ಚಟುವಟಿಕೆಗಳನ್ನು ಪೂರ್ಣಗೊಳಿಸಲು ಕ್ಲೀನ್ ಕೇರಳ ಕಂಪನಿ ಸಮರ್ಥವಾಗಿದೆ ಎಂದು ಸಚಿವರು ಹೇಳಿದರು. ಹಸಿರು ಕ್ರಿಯಾಸೇನೆಯ ಸಹಾಯದಿಂದ ಜಿಲ್ಲೆಯಲ್ಲಿ ಪ್ರತಿ ತಿಂಗಳು ಕ್ಲೀನ್ ಕೇರಳ ಕಂಪನಿ ಸಂಗ್ರಹಿಸುವ 400 ಟನ್ ತ್ಯಾಜ್ಯದಲ್ಲಿ, ಕೇವಲ ನೂರು ಟನ್ ಮಾತ್ರ ವಿಂಗಡಿಸಲಾಗಿದೆ. ಉಳಿದವುಗಳಿಂದ ದೊಡ್ಡ ಪ್ರಮಾಣದ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ವಿಂಗಡಿಸಲು ಈ ಸ್ಥಾವರವನ್ನು ಬಳಸಲಾಗುವುದು. ಸುಮಾರು 10,000 ಚದರ ಅಡಿ ವಿಸ್ತೀರ್ಣದ ಈ ಎರಡು ಅಂತಸ್ತಿನ ಕಟ್ಟಡವು ಅಗ್ನಿಶಾಮಕ ವ್ಯವಸ್ಥೆ, ಕಸ್ಟಮೈಸ್ ಮಾಡಿದ ಕನ್ವೇಯರ್ ಬೆಲ್ಟ್, ಎರಡು ಬೇಲಿಂಗ್ ಯಂತ್ರಗಳು ಮತ್ತು ಮಳೆನೀರು ಟ್ಯಾಂಕ್‍ಗಳಂತಹ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರಲಿದೆ. ಈ ಸ್ಥಾವರವು ಆರಂಭದಲ್ಲಿ ದಿನಕ್ಕೆ ಐದು ಟನ್ ತ್ಯಾಜ್ಯವನ್ನು ವಿಂಗಡಿಸಿ ಮಾರಾಟ ಮಾಡಲು ಸಾಧ್ಯವಾಗುತ್ತದೆ ಮತ್ತು ನಂತರ ದಿನಕ್ಕೆ 15 ಟನ್ ವರೆಗೆ ತ್ಯಾಜ್ಯವನ್ನು ವಿಂಗಡಿಸಿ ಸಿಮೆಂಟ್ ಕಾರ್ಖಾನೆಗೆ ಕಳುಹಿಸಲು ಸಾಧ್ಯವಾಗುತ್ತದೆ ಎಂದು ಸಚಿವರು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಮಾತನಾಡಿ, ಸ್ವಚ್ಛತೆಯ ಕ್ಷೇತ್ರದಲ್ಲಿ ಪ್ರತಿಯೊಂದು ವಲಯದಲ್ಲೂ ಪ್ರಥಮ ಸ್ಥಾನದಲ್ಲಿರುವ ಕೇರಳವನ್ನು ಇತರ ರಾಜ್ಯಗಳು ಕಲಿಯುವ ಮತ್ತು ಅನುಕರಿಸುವ ಸಮಯ ದೂರವಿಲ್ಲ ಎಂದು ಹೇಳಿದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಕಾಞಂಗಾಡ್ ನಗರಸಭೆ ಅಧ್ಯಕ್ಷೆ ಕೆ.ವಿ. ಸುಜಾತ, ಪುತ್ತಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಸುಬ್ಬಣ್ಣ ಆಳ್ವ, ಜಿಲ್ಲಾ ಪಂಚಾಯತಿ ಸದಸ್ಯ ನಾರಾಯಣ ನಾಯಕ್, ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯೆ ಎಂ. ಚಂದ್ರಾವತಿ, ಕಾಸರಗೋಡು ನಗರಸಭೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಖಾಲಿದ್ ಪೂಚಕ್ಕಾಡ್, ಸ್ಥಳೀಯಾಡಳಿತ ಇಲಾಖೆ ಜಂಟಿ ನಿರ್ದೇಶಕ ಆರ್. ಶೈನಿ, ಶುಚಿತ್ವ ಮಿಷನ್ ಜಿಲ್ಲಾ ಸಂಯೋಜಕ ಪಿ. ಜಯನ್, ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಎಂಜಿನಿಯರ್ ಪಿ.ಬಿ. ಶ್ರೀಲಕ್ಷ್ಮಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹ-ಸಂಯೋಜಕ ಎಚ್. ಕೃಷ್ಣ, ಪನತ್ತಡಿ ಗ್ರಾಮ ಪಂಚಾಯತಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಪ್ರೀತಾ, ಕೆಎಸ್‍ಡಬ್ಲ್ಯೂಎಂಪಿ ಉಪ ಜಿಲ್ಲಾ ಸಂಯೋಜಕ ಕೆ.ವಿ. ಮಿಥುನ್ ಕೃಷ್ಣನ್ ಮಾತನಾಡಿದರು. ಕ್ಲೀನ್ ಕೇರಳ ಕಂಪನಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಜಿ.ಕೆ. ಸುರೇಶ್ ಕುಮಾರ್ ಸ್ವಾಗತಿಸಿ, ಜಿಲ್ಲಾ ವ್ಯವಸ್ಥಾಪಕ ಮಿಥುನ್ ಗೋಪಿ ವಂದಿಸಿದರು. ತ್ಯಾಜ್ಯ ನಿರ್ವಹಣೆಯಲ್ಲಿ ಮಹತ್ತರ ಕೊಡುಗೆ ನೀಡಿದ ಹಸಿರು ಕ್ರಿಯಾಸೇನೆ ಮತ್ತು ಕಾರ್ಯಕ್ರಮದ ಭಾಗವಾಗಿ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರನ್ನು ಸನ್ಮಾನಿಸಲಾಯಿತು.




.jpeg)
.jpeg)
