ಪತ್ತನಂತಿಟ್ಟ: ಮಂಡಲ ಮಕರ ಬೆಳಕು ಉತ್ಸವಕ್ಕಾಗಿ ಶಬರಿಮಲೆ ದೇವಸ್ಥಾನ ತೆರೆಯಲಾಗಿದೆ. ಭಾನುವಾರ ಸಂಜೆ 5 ಗಂಟೆಗೆ ತಂತ್ರಿ ಮಹೇಶ ಮೋಹನರ ಸಮ್ಮುಖದಲ್ಲಿ ಹಾಲಿ ಮೇಲ್ಶಾಂತಿ ಅರುಣಕುಮಾರ ನಂಬೂದಿರಿ ದೇವಸ್ಥಾನವನ್ನು ತೆರೆದು ದೀಪ ಬೆಳಗಿಸಿದರು. ಅಯ್ಯಪ್ಪ ಸ್ವಾಮಿಯನ್ನು ಯೋಗ ನಿದ್ರೆಯಿಂದ ಎಚ್ಚರಗೊಳಿಸಲಾಯಿತು.
ನಂತರ ಮೇಲ್ಶಾಂತಿ ಅರುಣಕುಮಾರ ನಂಬೂದಿರಿ ದೇವಸ್ಥಾನದ ತುಪ್ಪದ ದೀಪದೊಂದಿಗೆ 18ನೇ ಮೆಟ್ಟಿಲು ಇಳಿದು ಯಜ್ಞಕುಂಡದಲ್ಲಿ ಅಗ್ನಿಸ್ಪರ್ಶ ನಡೆಸಿದರು. ಮಂಡಲ ಮಕರ ಬೆಳಕು ಉತ್ಸವ ಮುಗಿಯುವವರೆಗೂ ಕುಂಡದಲ್ಲಿ ನಿರಂತರವಾಗಿ ಅಗ್ನಿ ಬೆಳಗಲಿದೆ.
ನೇಮಕಗೊಂಡ ಶಬರಿಮಲೆ ಮೇಲ್ಶಾಂತಿ ಇ.ಡಿ. ಪ್ರಸಾದ್ ನಂಬೂತಿರಿ ಮತ್ತು ಮಾಳಿಗಪ್ಪುರಂ ಮೇಲ್ಶಾಂತಿ ಮನು ನಂಬೂದಿರಿ ಅವರು ಅರುಣಕುಮಾರ್ ನಂಬೂದಿರಿ ಅವರ ಕೈ ಹಿಡಿದು 18ನೇ ಮೆಟ್ಟಿಲು ಹತ್ತಿ ಸನ್ನಿಧಾನಕ್ಕೆ ಬಂದರು.
ವೃಶ್ಚಿಕ ಮಾಸದಲ್ಲಿ ದೇವಸ್ಥಾನದ ಪೂಜಾದಿಗಳನ್ನು ಪ್ರಧಾನ ಅರ್ಚಕ ಇ.ಡಿ. ಪ್ರಸಾದ್ ನಂಬೂದಿರಿ ನಿರ್ವಹಿಸುವರು. ದೇವಾಲಯ ತೆರೆದ ದಿನ ದರ್ಶನಕ್ಕೆ ಭಾರಿ ಜನಸಂದಣಿ ಕಂಡುಬಂತು.




