ಪತ್ತನಂತಿಟ್ಟ : ಶಬರಿಮಲೆ ದೇವಸ್ಥಾನದ ಚಿನ್ನ ಕಳವು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ), ವೈಜ್ಞಾನಿಕ ಪರೀಕ್ಷೆ ನಡೆಸಲು ದೇವಾಲಯಕ್ಕೆ ತಲುಪಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳ ಹೈಕೋರ್ಟ್ ಸೂಚನೆಯಂತೆ ಸೋಮವಾರ ಮಧ್ಯಾಹ್ನ 1 ಗಂಟೆಯ ಬಳಿಕ ದೇವ ಅನುಜ್ಞ ವಿಧಿ ವಿಧಾನಗಳು ನಡೆದ ನಂತರ ವೈಜ್ಞಾನಿಕ ಪರೀಕ್ಷೆ ನಡೆಯಲಿದೆ.
ತನಿಖಾಧಿಕಾರಿ ಡಿವೈಎಸ್‌ಪಿ ಎಸ್.ಶಶಿಧರನ್ ನೇತೃತ್ವದ ತಂಡ ಭಾನುವಾರ ಬೆಳಿಗ್ಗೆ ಇಲ್ಲಿಗೆ ತಲುಪಿದೆ. ಪೊಲೀಸರಲ್ಲದೆ, ವಿಧಿವಿಜ್ಞಾನ ತಜ್ಞರು ಕೂಡ ಈ ತಂಡವನ್ನು ಸೇರಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯವಿಧಾನವನ್ನು ಪೂರ್ಣಗೊಳಿಸಲು ತನಿಖಾ ತಂಡ, ಸೋಮವಾರ ಸನ್ನಿಧಾನದಲ್ಲಿ ಉಳಿದುಕೊಳ್ಳಲಿದೆ ಎನ್ನಲಾಗಿದೆ.
2019ರಲ್ಲಿ ವರದಿಯಾದ ಚಿನ್ನದ ನಷ್ಟದ ಪ್ರಮಾಣವನ್ನು ನಿರ್ಧರಿಸಲು, ದ್ವಾರಪಾಲಕ ಮೂರ್ತಿಗಳ ವೈಜ್ಞಾನಿಕ ಪರೀಕ್ಷೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯದ ಅನುಮತಿ ಕೋರಿತ್ತು.
Sಚಿbಚಿಡಿimಚಿಟಚಿ ಉoಟಜ ಖಿheಜಿಣ ಖoತಿ | ಸಾಕ್ಷ್ಯ ಸಂಗ್ರಹ: ಪ್ರಮುಖ ಆರೋಪಿ ಬೆಂಗಳೂರಿಗೆ
ದೇವಸ್ಥಾನದ ದ್ವಾರಪಾಲಕ ಮೂರ್ತಿಗಳ ತಾಮ್ರದ ಕವಚಕ್ಕೆ ಲೇಪಿಸಿದ್ದ ಚಿನ್ನ ಹಾಗೂ ಶ್ರೀಕೋವಿಲ್‌ನ ಬಾಗಿಲ ಚೌಕಟ್ಟಿನ ಚಿನ್ನದ ತೂಕ ಕಡಿಮೆಯಾಗಿರುವ ಬಗ್ಗೆ ಎಸ್‌ಐಟಿ ತನಿಖೆ ನಡೆಸುತ್ತಿದೆ.
ಚಿನ್ನದ ಲೇಪನದ ಶುದ್ಧತೆ ಮತ್ತು ಗುಣಮಟ್ಟವನ್ನು ಅಂದಾಜಿಸಲು ಒಂದು ಮಾದರಿಯನ್ನು ಸಂಗ್ರಹಿಸಲು, ಕವಚದ ಮೇಲ್ಮೈ ವಿಸ್ತೀರ್ಣವನ್ನು ಅಳೆಯಲು ಮತ್ತು ದ್ವಾರಪಾಲಕ ಮೂರ್ತಿಗಳ ಕವಚ ಮತ್ತು ಬಾಗಿಲಿನ ಚೌಕಟ್ಟುಗಳಿಂದ ತಾಮ್ರದ ಮಾದರಿಗಳನ್ನು ಸಂಗ್ರಹಿಸಲು ನ್ಯಾಯಾಲಯ ತನಿಖಾಧಿಕಾರಿಗಳಿಗೆ ಸೂಚಿಸಿದೆ.
ಈ ಮಾದರಿಗಳನ್ನು ವಿದ್ಯುತ್ ವಾಹಕತೆ, ಸ್ಪೆಕ್ಟ್ರೋಸ್ಕೋಪಿಕ್ ಮತ್ತು ಸೂಕ್ಷ್ಮ ರಚನೆ ಪರೀಕ್ಷೆಗಳು ಸೇರಿದಂತೆ ವೈಜ್ಞಾನಿಕ ವಿಶ್ಲೇಷಣೆಗಳಿಗೆ ಒಳಪಡಿಸಬೇಕು ಎಂದು ಹೇಳಿದೆ.
ಆರಂಭದಲ್ಲಿ ನವೆಂಬರ್ 15ರೊಳಗೆ ಪರೀಕ್ಷೆಗಳನ್ನು ಪೂರ್ಣಗೊಳಿಸುವಂತೆ ನ್ಯಾಯಾಲಯ ಎಸ್‌ಐಟಿಗೆ ಆದೇಶಿಸಿತ್ತು. ಆದರೆ, ಮುಖ್ಯ ಅರ್ಚಕರ (ತಂತ್ರಿ) ಅಭಿಪ್ರಾಯ ಕೇಳಿದಾಗ, ದೇವ ಅನುಜ್ಞ ವಿಧಿಗಳ ನಂತರವೇ ವೈಜ್ಞಾನಿಕ ಪರೀಕ್ಷೆಯನ್ನು ನಡೆಸಬೇಕೆಂದು ಹೇಳಿದ್ದರು. ಹಾಗಾಗಿ ನ.17 ರಂದು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.




