HEALTH TIPS

ಸತ್ಯಸಾಯಿ ಬಾಬಾ ಶತಮಾನೋತ್ಸವ: ನಾಣ್ಯ, ಅಂಚೆ ಚೀಟಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ಪುಟ್ಟಪರ್ತಿ: ಆಧ್ಯಾತ್ಮಿಕ ನಾಯಕ ಸತ್ಯಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದಾರೆ.

ಮೋದಿ ಅವರು ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯಲ್ಲಿರುವ ಸತ್ಯಸಾಯಿ ಬಾಬಾ ಅವರ ಮಹಾಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದರು.

ಬಳಿಕ ನಗರದ ಹಿಲ್‌ ವ್ಯೂ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಯಿ ಬಾಬಾ ಅವರ ಜೀವನ ಮತ್ತು ಬೋಧನೆಗಳನ್ನು ಸಾರುವ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು.

ಇದೇ ವೇಳೆ ಮಾತನಾಡಿದ ಅವರು, 'ಈ ಪವಿತ್ರ ಭೂಮಿಯಲ್ಲಿ ಇಂದು ನಿಮ್ಮೆಲ್ಲರ ನಡುವೆ ಇರುವುದು ನನಗೆ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಅನುಭವವಾಗಿದೆ. ಶ್ರೀ ಸತ್ಯಸಾಯಿ ಬಾಬಾ ಅವರ ಈ ಜನ್ಮ ಶತಮಾನೋತ್ಸವವು ಕೇವಲ ಆಚರಣೆಯಲ್ಲ. ಬದಲಾಗಿ ಇದು ದೈವಿಕ ಆಶೀರ್ವಾದ ಎಂದು ನಾನು ಭಾವಿಸುತ್ತೇನೆ. ಸಾಯಿ ಬಾಬಾ ಅವರು ನಮ್ಮ ನಡುವೆ ಭೌತಿಕವಾಗಿ ಇಲ್ಲದಿದ್ದರೂ, ಅವರ ಬೋಧನೆ, ಪ್ರೀತಿ ಮತ್ತು ಸೇವಾ ಮನೋಭಾವವು ಲಕ್ಷಾಂತರ ಜನರಿಗೆ ಮಾರ್ಗದರ್ಶನ ನೀಡುತ್ತಲೇ ಇದೆ' ಎಂದು ಹೇಳಿದರು.

'140ಕ್ಕೂ ಹೆಚ್ಚು ದೇಶಗಳಲ್ಲಿ ಲಕ್ಷಾಂತರ ಜೀವಗಳು ಹೊಸ ಬೆಳಕು, ಹೊಸ ನಿರ್ದೇಶನ ಮತ್ತು ಹೊಸ ಸಂಕಲ್ಪದೊಂದಿಗೆ ಮುಂದುವರಿಯುತ್ತಿವೆ. ಸತ್ಯಸಾಯಿ ಬಾಬಾ ಅವರ ಜೀವನವು ವಸುಧೈವ ಕುಟುಂಬಕಂನ ಜೀವಂತ ಸಾಕಾರವಾಗಿತ್ತು. ಆದ್ದರಿಂದ, ಈ ಜನ್ಮ ಶತಮಾನೋತ್ಸವವು ನಮಗೆ ಸಾರ್ವತ್ರಿಕ ಪ್ರೀತಿ, ಶಾಂತಿ ಮತ್ತು ಸೇವೆಯ ಭವ್ಯ ಹಬ್ಬವಾಗಿದೆ' ಎಂದೂ ಮೋದಿ ತಿಳಿಸಿದರು.

ಆಂಧ್ರ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಸೇರಿದಂತೆ ಇತರರು ಇದ್ದರು.

ಸತ್ಯಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವವನ್ನು ಶ್ರೀ ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್ ನವೆಂಬರ್ 13ರಿಂದ 24ರವರೆಗೆ ಆಯೋಜಿಸಿದೆ.

2011ರಲ್ಲಿ ಸಾಯಿ ಬಾಬಾ ನಿಧನವಾದ ನಂತರ ಟ್ರಸ್ಟ್‌ ಆಯೋಜಿಸಿರುವ ಅತ್ಯಂತ ದೊಡ್ಡ ಕಾರ್ಯಕ್ರಮ ಇದಾಗಿದ್ದು, ದೇಶ-ವಿದೇಶಗಳಿಂದ ಜನರು ಆಂಧ್ರಪ್ರದೇಶದ ಚಿತ್ರಾವತಿ ನದಿ ದಂಡೆಯಲ್ಲಿರುವ ಪುಟ್ಟಪರ್ತಿಯ ಪ್ರಶಾಂತಿ ನಿಲಯದಲ್ಲಿ ಸೇರಿದ್ದಾರೆ. ಕೆಲವರು ಆಚರಣೆಗಳಲ್ಲಿ ಭಾಗವಹಿಸಲು ಬಂದಿದ್ದರೆ, ಇನ್ನೂ ಕೆಲವರು ಕಾರ್ಯಕ್ರಮದಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಲು ಬಂದಿದ್ದಾರೆ.

ಕಾರ್ಯಕ್ರಮಕ್ಕೆ ಬರುವವರನ್ನು ಸ್ವಾಗತಿಸಲು ವರ್ಣರಂಜಿತ ದೀಪಗಳು, ತಾತ್ಕಾಲಿಕ ಸ್ವಾಗತ ದ್ವಾರಗಳಿಂದ ಪುಟ್ಟಪರ್ತಿ ಅಲಂಕರಿಸಲ್ಪಟ್ಟಿದೆ. ಅಲ್ಲದೆ, ಶತಮಾನೋತ್ಸವದ ಆಚರಣೆಗಾಗಿ ಪುಟ್ಟಪರ್ತಿ ಚಟುವಟಿಕೆಗಳಿಂದ ತುಂಬಿದ್ದು, ಇದಕ್ಕಾಗಿ ಜಗತ್ತಿನ ಸುಮಾರು 140 ದೇಶಗಳಿಂದ ಭಕ್ತರು ಒಟ್ಟುಗೂಡುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries