ಕಾಸರಗೋಡು: ಮಕ್ಕಳ ದಿನಾಚರಣೆಯ ಅಂಗವಾಗಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ನೇತೃತ್ವದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಕಾರದೊಂದಿಗೆ ಮಕ್ಕಳ ದಿನಾಚರಣೆ ರ್ಯಾಲಿ ಮತ್ತು ವಿದ್ಯಾರ್ಥಿಗಳ ಮಹಾಸಭೆಯನ್ನು ಆಯೋಜಿಸಲಾಯಿತು.
ವಿದ್ಯಾನಗರದಲ್ಲಿಎಎಸ್‍ಎಪಿ ಕಚೇರಿ ಆವರಣದಿಂದ ಸನ್‍ರೈಸ್ ಪಾರ್ಕ್ ವರೆಗೆ ನಡೆದ ರ್ಯಾಲಿಯನ್ನು ಕಾಸರಗೋಡು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಂ. ನಂದಗೋಪನ್ ಉದ್ಘಾಟಿಸಿದರು. ರ್ಯಾಲಿಯಲ್ಲಿ 24 ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ರ್ಯಾಲಿಯಲ್ಲಿ ಮಕ್ಕಳ ಪ್ರಧಾನಿ ಮತ್ತು ರಾಷ್ಟ್ರಪತಿ, ಸ್ಪೀಕರ್ ಮತ್ತು ವಿರೋಧ ಪಕ್ಷದ ನಾಯಕರನ್ನು ತೆರೆದ ವಾಹನದಲ್ಲಿ ಕರೆದೊಯ್ಯಲಾಯಿತು.
ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಸ್ಮರಣಾರ್ಥ ಮಕ್ಕಳ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ವರ್ಣರಂಜಿತ ರ್ಯಾಲಿಯಲ್ಲಿ ಎಸ್‍ಪಿಸಿ ಸ್ಕೌಟ್ಸ್ ಮತ್ತು ಗೈಡ್ಸ್, ಕೋಲ್ಕಲಿ, ಬ್ಯಾಂಡ್ ಮೇಳ, ಒಪ್ಪನ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಪಾಲ್ಗೊಮಡಿತ್ತು.
ರ್ಯಾಲಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಶಾಲೆಗಳಿಗೆ ಪ್ರಶಸ್ತಿ ನೀಡಲಾಯಿತು. ಪಿ.ಟಿ.ಎಂ.ಎ. ಯು.ಪಿ. ಶಾಲೆ ಬೆದಿರ ಪ್ರಥಮ, ಟಿ.ಐ.ಎಚ್.ಎಚ್.ಎಸ್. ನಾಯಮರ್‍ಮೂಲೆ ದ್ವಿತೀಯ ಹಾಗೂ ಮಡೋನಾ ಶಾಲೆ ಕಾಸರಗೋಡು ಮತ್ತು ಜಿ.ಎಂ.ಯು.ಪಿ.ಎಸ್. ಮುಳಿಯಾರ್ ತೃತೀಯ ಸ್ಥಾನ ಹಂಚಿಕೊಂಡಿತು. ಈ ಸಂದರ್ಭ ನಡೆದ ವಿದ್ಯಾರ್ಥಿ ಮಹಾಸಭೆಯನ್ನು ಮಕ್ಕಳ ಪ್ರಧಾನ ಮಂತ್ರಿ ಬಿ.ಎ. ಖದೀಜತ್ ಹಸ್ವಾ ಉದ್ಘಾಟಿಸಿದರು. ಮಕ್ಕಳ ಅಧ್ಯಕ್ಷೆ ಕೆ.ಎಸ್. ಪ್ರಣಮ್ಯ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ವಿರೋಧ ಪಕ್ಷದ ನಾಯಕಿ ಪಿ. ವೇದಾ ನಾಯರ್ ಮುಖ್ಯ ಭಾಷಣ ಮಾಡಿದರು. ವಿದ್ಯಾರ್ಥಿ ಉಪನ್ಯಾಸಕ ಕೆ. ಶ್ರೀನಂದ ಸ್ವಾಗತಿಸಿದರು. ಮಕ್ಕಳ ಪ್ರತಿನಿಧಿ ಪಿ. ದಿಲ್ಶಾ ವಂದಿಸಿದರು.
ಎಂಡೋಸಲ್ಫಾನ್ ಕೋಶದ ಸಹಾಯಕ ಜಿಲ್ಲಾಧಿಕಾರಿ ಲಿಪು ಎಸ್. ಲಾರೆನ್ಸ್ ಮಕ್ಕಳ ದಿನಾಚರಣೆಯ ಸಂದೇಶ ನೀಡಿದರು. ಕಾರ್ಯಕ್ರಮದ ಅಂಗವಾಗಿ ಹೊರತರಲಾದ ಮಕ್ಕಳ ದಿನಾಚರಣೆಯ ಅಂಚೆಚೀಟಿಯನ್ನು ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್ ಬಿಡುಗಡೆಗೊಳಿಸಿದರು. ಸಾಮಾಜಿಕ ಕಾರ್ಯಕರ್ತೆ ಮೃದುಲಾ ಬಾಯಿ ಮಣ್ಣೂರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಕಾರ್ಯದರ್ಶಿ ಟಿ.ಎಂ.ಎ. ಕರೀಂ, ಕಾಸರಗೋಡು ಎಇಒ ಆಗಸ್ಟೀನ್ ಬರ್ನಾರ್ಡ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಟಿ. ಹಫ್ಸತ್ ಬಹುಮಾನ ವಿತರಿಸಿದರು. ಮಕ್ಕಳ ಕಲ್ಯಾಣ ಸಮಿತಿಯ ಪದಾಧಿಕಾರಿಗಳಾದ ಗಿರೀಶನ್, ಜಯನ್ ಕಡಕಂ, ಪ್ರವೀಣಪಾಡಿ, ಎನ್.ವಿ.ನಾರಾಯಣನ್, ಅಲೀನಾ ಮ್ಯಾಥ್ಯೂ, ಕೆ.ಅನುಶ್ರೀ ನೇತೃತ್ವ ವಹಿಸಿದ್ದರು.





