ಪತ್ತನಂತಿಟ್ಟ: ಸಿಪಿಎಂ ನಾಯಕ ಮತ್ತು ತಿರುವಾಂಕೂರು ದೇವಸ್ವಂ ಮಂಡಳಿಯ ಮಾಜಿ ಅಧ್ಯಕ್ಷ ಎ. ಪದ್ಮಕುಮಾರ್ ಅವರು ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ತಂತ್ರಿ ಕಂಠಾರರ್ ರಾಜೀವರ್ ಭಾಗಿ ಎಂದು ವಿಶೇಷ ತನಿಖಾ ತಂಡಕ್ಕೆ ಹೇಳಿಕೆ ನೀಡಿದ್ದಾರೆ. ಉಣ್ಣಿಕೃಷ್ಣನ್ ಪೋತ್ತಿ ಅವರೊಂದಿಗೆ ತಂತ್ರಿಗಳಿಗೆ ನಿಕಟ ಸಂಬಂಧವಿದೆ ಎಂದು ಪದ್ಮಕುಮಾರ್ ಅವರ ಹೇಳಿಕೆಯಲ್ಲಿ ಹೇಳಲಾಗಿದ್ದು ತಂತ್ರಿ ಘಟನೆಯಲ್ಲೀಗ ಸಿಲುಕಿದ್ದಾರೆ.
ಉಣ್ಣಿಕೃಷ್ಣನ್ ಪೋತ್ತಿ ಶಬರಿಮಲೆಯಲ್ಲಿ ತಂತ್ರಿ ಮತ್ತು ಅಧಿಕಾರಿಗಳ ಬೆಂಬಲದೊಂದಿಗೆ ಪ್ರಬಲರಾದರು ಎಂದು ಎ. ಪದ್ಮಕುಮಾರ್ ಹೇಳಿದ್ದಾರೆ. ಆದಾಗ್ಯೂ, ಶಬರಿಮಲೆಯಲ್ಲಿ ಪ್ರಾಯೋಜಕರಾಗಲು ಸರ್ಕಾರದಲ್ಲಿ ಯಾರನ್ನು ಪೋತ್ತಿ ಸಂಪರ್ಕಿಸಿದರು ಎಂಬ ಪ್ರಶ್ನೆಗೆ ಪದ್ಮಕುಮಾರ್ ನಿಖರವಾದ ಉತ್ತರವನ್ನು ನೀಡಲಿಲ್ಲ. ದೇವಸ್ವಂನ ಮಾಜಿ ಸಚಿವ ಮತ್ತು ಸಿಪಿಎಂ ನಾಯಕ ಕಡಕಂಪಳ್ಳಿ ಸುರೇಂದ್ರನ್ ಅವರ ಬಗೆಗಿನ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ.
ಗರ್ಭಗುಡಿಯಲ್ಲಿ ಚಿನ್ನ ಲೇಪನ ಕೆಲಸವನ್ನು ನಿಯಮಗಳಿಗೆ ವಿರುದ್ಧವಾಗಿ ದೇವಾಲಯದಿಂದ ಹೊರಗೆ ತೆಗೆದುಕೊಂಡೊಯ್ಯಲು ಅನುಮತಿ ನೀಡಲಾಗಿದೆ ಎಂದು ಪದ್ಮಕುಮಾರ್ ತನಿಖಾ ತಂಡಕ್ಕೆ ತಿಳಿಸಿದ್ದಾರೆ. ಈ ಸಂಬಂಧ ಸ್ಪಷ್ಟೀಕರಣಕ್ಕಾಗಿ ಉಣ್ಣಿಕೃಷ್ಣನ್ ಪೋತ್ತಿ ಅವರನ್ನು ಮತ್ತೆ ಕಸ್ಟಡಿಗೆ ತೆಗೆದುಕೊಳ್ಳಲು ವಿಶೇಷ ತನಿಖಾ ತಂಡವು ಕ್ರಮ ಆರಂಭಿಸಿದೆ. ತಂತ್ರಿಯ ಹೇಳಿಕೆಯನ್ನು ಸಹ ಮತ್ತೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಪದ್ಮಕುಮಾರ್, ಉಣ್ಣಿಕೃಷ್ಣನ್ ಪೋತ್ತಿ ಮತ್ತು ಮುರಾರಿ ಬಾಬು ಅವರನ್ನು ಕೊಲ್ಲಂ ವಿಜಿಲೆನ್ಸ್ ನ್ಯಾಯಾಲಯದಲ್ಲಿ ಎರಡು ವಾರಗಳ ಕಾಲ ರಿಮ್ಯಾಂಡ್ ಮಾಡಲಾಗಿದೆ. ಮುರಾರಿ ಬಾಬು ಜಾಮೀನು ಕೋರಿ ಶುಕ್ರವಾರ ಹೈಕೋರ್ಟ್ ಮೊರೆ ಹೋಗಲಿದ್ದಾರೆ.

