ಬದಿಯಡ್ಕ: ಕಷ್ಟದಲ್ಲಿರುವವರಿಗೆ ದಾರಿತೋರಿಸಿ ನೆರವಾಗುವುದು ಶ್ರೇಯಸ್ಕರ. ದಾನ ಮಾಡುವ ಪ್ರವೃತ್ತಿಯನ್ನು ಸಮಾಜದಲ್ಲಿ ಬೆಳೆಸಿಕೊಳ್ಳಬೇಕು. ಕೊಟ್ಟದ್ದು, ದಾನ ಮಾಡಿರುವುದು ನಮಗೆ ಆದರೆ ಬಚ್ಚಿಟ್ಟದ್ದು ಪರರಿಗೆ ಎಂಬುದು ನಮ್ಮ ಮನದಲ್ಲಿರಬೇಕು. ದಾನ ಮಾಡುವ ಮನಸ್ಸು ಸಮಾಜದಲ್ಲಿ ಬೆಳೆಯಲಿ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಿಳಿಸಿದರು.
ಭಾನುವಾರ ಕಿಳಿಂಗಾರು ಶ್ರೀ ಸಾಯಿಮಂದಿರದಲ್ಲಿ ಜರಗಿದ ಸತ್ಯಸಾಯಿಬಾಬಾರ ಜನ್ಮದಿನಾಚರಣೆ ಹಾಗೂ ಶ್ರೀ ಸಾಯಿಮಂದಿರದ ಬೆಳ್ಳಿಹಬ್ಬದ ಸಂಭ್ರಮಾಚರಣೆಯ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನವನ್ನು ನೀಡಿದರು.
ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬುದನ್ನು ಕಿಳಿಂಗಾರಿನ ಸಾಯಿರಾಂ ಕುಟುಂಬದವರು ನಂಬಿಕೊಂಡು ಬಂದವರಾಗಿದ್ದಾರೆ. ಸೇವಾಕಾರ್ಯ ನಿರಂತರವಾಗಿ ನಡೆಯಲಿ ಎಂದು ಆಶೀರ್ವದಿಸಿದರು.
ಕೊಡುಗೈದಾನಿ ಕಿಳಿಂಗಾರು ಸಾಯಿರಾಂ ಕೃಷ್ಣ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ ಕುಲಗುರುಗಳ ಅನುಗ್ರಹದೊಂದಿಗೆ ಸಾಯಿಮಂದಿರವು ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಸಾಯಿಬಾಬಾರ ಜನ್ಮದಿನವಾದ ಇಂದು ದಾನ ಮಾಡುವ ದಿನವಾಗಿದೆ. ಈ ನಿಟ್ಟಿನಲ್ಲಿ 9 ಜನರಿಗೆ ಹೊಲಿಗೆಯಂತ್ರ, 7 ಜನರಿಗೆ ಅಸೌಖ್ಯ ಹಾಗೂ ವಿದ್ಯಾಭ್ಯಾಸಕ್ಕೆ ನೆರವನ್ನು ನೀಡುತ್ತಿದ್ದೇವೆ ಎಂದು ತಿಳಿಸಿ ಸ್ವಾಗತಿಸಿದರು. ಶ್ರೀಗಳು ಫಲಾನುಭವಿಗಳಿಗೆ ಆಶೀರ್ವಾದ ಮಂತ್ರಾಕ್ಷತೆಯನ್ನಿತ್ತು ಹರಸಿದರು. ಇದೇ ಸಂದರ್ಭದಲ್ಲಿ ಸಾಯಿರಾಂ ಕೃಷ್ಣ ಭಟ್ ಅವರಿಗೆ ಪ್ರಾಥಮಿಕ ವಿದ್ಯಾಭ್ಯಾಸವನ್ನು ನೀಡಿದ ಗುರುಗಳಾದ ಅಪ್ರತಿಮ ಗೆರಟೆ ಕಲಾವಿದ, ನಿವೃತ್ತ ಅಧ್ಯಾಪಕ ಇ. ಕೃಷ್ಣ ಭಟ್ಟ ಆರೋಳಿ ಅವರನ್ನು ಶ್ರೀಗಳು ಸನ್ಮಾನ ಪತ್ರದೊಂದಿಗೆ ಆಶೀರ್ವಾದ ಮಂತ್ರಾಕ್ಷತೆಯನ್ನಿತ್ತು ಹರಸಿದರು. ನಿವೃತ್ತ ಅಧ್ಯಾಪಕ ಶ್ಯಾಮಪ್ರಸಾದ ಕುಳಮರ್ವ ನಿರೂಪಪಿಸಿದರು. ಪ್ರಾತಃಕಾಲದಲ್ಲಿ ಆಗಮಿಸಿದ ಶ್ರೀಗಳನ್ನು ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು. ಶ್ರೀಪೂಜೆ, ಭಿಕ್ಷಾ ಸೇವೆ, ಪಾದುಕಾ ಪೂಜೆ ನಡೆಯಿತು. ಹವ್ಯಕ ಮಹಾಮಂಡಲ, ಮುಳ್ಳೇರಿಯ ಮಂಡಲ, ನೀರ್ಚಾಲು ವಲಯದ ಪದಾಧಿಕಾರಿಗಳು, ಶಿಷ್ಯಭಕ್ತರು, ಗುರಿಕ್ಕಾರರು ಪಾಲ್ಗೊಂಡಿದ್ದರು.




.jpg)
.jpg)
