ಕಾಸರಗೋಡು: ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾದ ವ್ಯಕ್ತಿಗೆ ಹಲ್ಲೆ ನಡೆಸಿರುವುದಲ್ಲದೆ, ವೈದ್ಯಾಧಿಕಾರಿಗಳ ಕರ್ತವ್ಯಕ್ಕೆ ಅಡಚಣೆ ವ್ಯಕ್ತಪಡಿಸಿರುವುದನ್ನು ಪ್ರತಿಭಟಿಸಿ ಆಸ್ಪತ್ರೆ ವೈದ್ಯರು ಪ್ರತಿಭಟನೆ ಮುಂದುವರಿಸಿದ್ದಾರೆ. ಕೇರಳ ಸರ್ಕಾರಿ ವೈದ್ಯಾಧಿಕಾರಿಗಳ ಸಂಘಟನೆ(ಕೆಜಿಎಂಓಎ)ಮತ್ತು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್(ಐಎಂಎ)ವತಿಯಿಂದ ಆಸ್ಪತ್ರೆ ಎದುರು ಪ್ರತಿಭಟನೆ ಆಯೋಜಿಸಲಾಗಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಕೆಜಿಎಂಓಎ ಜಿಲ್ಲಾಧ್ಯಕ್ಷೆ ಡಾ. ಶಮೀಮಾ ತನ್ವೀರ್, ಐಎಂಎ ಕಾಸರಗೋಡು ಶಾಖೆ ಅಧ್ಯಕ್ಷ ಎ ಡಾ. ರೇಖಾ ರೈ, ಡಾ. ಜನಾರ್ದನ ನಾಯ್ಕ್, ಡಾ. ಅನ್ಸಾದ್, ಡಾ. ಸಂಧ್ಯಾಪ್ರದೀಪ್, ಡಾ. ಜಮಾಲ್ ಅಹಮ್ಮದ್, ಆಸ್ಪತ್ರೆ ಪ್ರಭಾರಿ ಮೇಲ್ವಿಚಾರಕ ಡಾ. ಸುನಿಲ್‍ಕುಮಾರ್, ನರ್ಸಿಂಗ್ ಸೂಪರಿಂಟೆಂಡೆಂಟ್ ಲತಾ ಎಸ್.ಎಸ್ ಹಾಗೂ ಆಸ್ಪತ್ರೆ ಇತರ ಸಿಬ್ಬಂದಿ ಉಪಸ್ಥಿತರಿದ್ದರು. ಡಾ. ಅರುಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ನಗರದ ಅಣಂಗೂರಿನ ಬೆದಿರ ಎಂಬಲ್ಲಿ ಶುಕ್ರವಾರ ಸಂಬಂಧಿಕರಿಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದು, ಗಾಯಾಳುಗಾಳದ ಸೈನುದ್ದೀನ್ ಹಾಗೂ ಶಿಹಾಬ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೇ ಸಂದರ್ಭ ಶಾನಿಬ್ ಎಂಬಾತ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದ ತುರ್ತು ಚಿಕಿತ್ಸಾ ವಿಭಾಗದ ಕೊಠಡಿಗೆ ನುಗ್ಗಿ ಗಾಯಾಳುಗಳ ಮೇಲೆ ಹಲ್ಲೆ ನಡೆಸಿದ್ದು, ಈ ಮಧ್ಯೆ ತಡೆಯಲೆತ್ನಿಸಿದ ವೈದ್ಯೆಯ ಮೇಲೂ ಹಲ್ಲೆಗೆ ಯತ್ನಿಸಿರುವುದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಮಹಿಳಾ ವೈದ್ಯೆ ನೀಡಿದ ದೂರಿನನ್ವಯ ನಗರ ಠಾಣೆ ಪೊಲೀಸರು ಅಣಂಗೂರು ನಿವಾಸಿ ಶಾನಿಬ್ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.
ವೈದ್ಯರ ಮುಷ್ಕರದ ಹಿನ್ನಲೆಯಲ್ಲಿ ತಾಸು ಕಾಲ ರೋಗಿಗರು ಪರದಾಡಬೇಕಾಯಿತು. ಆಸ್ಪತ್ರೆ ವೈದ್ಯರಿಗೆ ಹಾಗೂ ಇತರ ಸಿಬ್ಬಂದಿಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.




