HEALTH TIPS

Delhi Blast| ಆತ್ಮಾಹುತಿ ಬಾಂಬರ್‌ಗೆ ಆಶ್ರಯ ನೀಡಿದ್ದ ಆರೋಪ: NIA ವಶಕ್ಕೆ ಸೋಯಾಬ್

ನವದೆಹಲಿ: ಕೆಂಪು ಕೋಟೆ ಬಳಿ ಸಂಭವಿಸಿದ್ದ ಕಾರು ಸ್ಫೋಟದ ಪ್ರಮುಖ ಆರೋಪಿ, 'ಆತ್ಮಾಹುತಿ ಬಾಂಬರ್' ಡಾ.ಉಮರ್ ನಬಿಗೆ ಆಶ್ರಯ ನೀಡಿದ ಆರೋಪದ ಮೇಲೆ ಬಂಧಿಸಲಾಗಿರುವ ಫರಿದಾಬಾದ್‌ನ ಧೌಜ್ ನಿವಾಸಿ ಸೋಯಾಬ್‌ನನ್ನು ದೆಹಲಿ ನ್ಯಾಯಾಲಯವು, 10 ದಿನಗಳ ಕಾಲ ಎನ್‌ಐಎ ವಶಕ್ಕೆ ಒಪ್ಪಿಸಿದೆ.

ಹರಿಯಾಣದ ಫರಿದಾಬಾದ್‌ನ ಧೌಜ್‌ನಲ್ಲಿ ಆತನನ್ನು ಬಂಧಿಸಿದ ತನಿಖಾ ಸಂಸ್ಥೆ, ಬಳಿಕ ಬಿಗಿ ಭದ್ರತೆಯ ನಡುವೆ ಪಟಿಯಾಲ ಹೌಸ್ ನ್ಯಾಯಾಲಯದ ಮುಂದೆ ಹಾಜರುಪಡಿಸಿತು.

ಇದೇ ವೇಳೆ ನವೆಂಬರ್ 27ರಂದು 10 ದಿನಗಳ ಕಸ್ಟಡಿ ಅವಧಿ ಮುಕ್ತಾಯಗೊಳ್ಳಲಿದ್ದ ಮತ್ತೊಬ್ಬ ಪ್ರಮುಖ ಆರೋಪಿ ಅಮೀರ್ ರಶೀದ್ ಅಲಿಯನ್ನೂ ಸಂಸ್ಥೆ ನ್ಯಾಯಾಲಯದಲ್ಲಿ ಹಾಜರುಪಡಿಸಿತು.

ಸೋಯಾಬ್‌ನನ್ನು 10 ದಿನಗಳ ಎನ್‌ಐಎ ಕಸ್ಟಡಿಗೆ ಒಪ್ಪಿಸಿ ಹಾಗೂ ಅಮೀರ್‌ನನ್ನು ಇನ್ನೂ ಏಳು ದಿನಗಳ ಕಾಲ ವಿಚಾರಣೆ ನಡೆಸಲು ಅವಕಾಶ ನೀಡಿ, ನ್ಯಾ. ಅಂಜು ಬಜಾಜ್ ಚಂದನಾ ಆದೇಶಿಸಿದ್ದಾರೆ.

ವೈಟ್‌-ಕಾಲರ್ ಭಯೋತ್ಪಾದನೆ ಮತ್ತು ದೆಹಲಿ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದಂತೆ ಎನ್‌ಐಎ ಬಂಧಿಸಿದ ಏಳನೇ ಆರೋಪಿ ಸೋಯಾಬ್. ಭಯೋತ್ಪಾದಕ ಕೃತ್ಯ ನಡೆಸಲು ನಬಿಗೆ ಆಶ್ರಯ ನೀಡಿದ್ದಲ್ಲದೇ, ಕೃತ್ಯಕ್ಕೆ ಬೇಕಾದ ಸರಕುಗಳನ್ನು ಒದಗಿಸಿದ್ದ ಆರೋಪದ ಮೇಲೆ ಈತನನ್ನು ಬಂಧಿಸಲಾಗಿದೆ ಎಂದು ತನಿಖಾ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

'ಆತ್ಮಾಹುತಿ ಬಾಂಬ್ ದಾಳಿಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ದಾಳಿಯಲ್ಲಿ ಭಾಗಿಯಾಗಿರುವ ಇತರರನ್ನು ಗುರುತಿಸಲು ಆಯಾ ಪೊಲೀಸ್ ಪಡೆಗಳ ಸಮನ್ವಯದೊಂದಿಗೆ ವಿವಿಧ ರಾಜ್ಯಗಳಲ್ಲಿ ಶೋಧಗಳನ್ನು ನಡೆಸಲಾಗುತ್ತಿದೆ' ಎಂದು ಎನ್‌ಐಎ ಪ್ರಕಟಣೆಯಲ್ಲಿ ತಿಳಿಸಿದೆ.

ನವೆಂಬರ್ 10ರಂದು ದೆಹಲಿಯ ಕೆಂಪು ಕೋಟೆ ಸಮೀಪ ನಡೆದಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 15 ಮಂದಿ ಮೃತಪಟ್ಟಿದ್ದರು.

ಸ್ಫೋಟಗೊಂಡ ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿ ಡಾ. ಉಮರ್‌ ನಬಿ ಎನ್ನುವುದು ದೃಢಪಟ್ಟಿದೆ. ಹುಂಡೈ ಐ20 ಕಾರಿನಲ್ಲಿ ದೊರೆತ ದೇಹದ ಭಾಗಗಳನ್ನು ಉಮರ್‌ ತಾಯಿಯ ಡಿಎನ್‌ಎ ಜತೆ ಪರೀಕ್ಷಿಸಿದ ಬಳಿಕ ಅದು ಸ್ಪಷ್ಟವಾಗಿದೆ. ಸ್ಫೋಟದ ವೇಳೆ ಕಾರಿನಲ್ಲಿ ಉಮರ್‌ ಒಬ್ಬನೇ ಇದ್ದ ಎಂಬುದನ್ನೂ ತನಿಖಾಧಿಕಾರಿಗಳು ದೃಢಪಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries