ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆಯ ಬಳಿ ಸಂಭವಿಸಿದ ಕಾರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ನ.12) ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಹತ್ವದ ಭದ್ರತಾ ಸಂಪುಟ ಸಮಿತಿಯ (CCS) ಸಭೆ ನಡೆಯಲಿದೆ.
ಪ್ರಧಾನಿ ಭೂತಾನ್‌ನಿಂದ ಹಿಂದಿರುಗಿದ ಕೂಡಲೇ ಈ ಸಭೆ ನಡೆಯಲಿದೆ. ಈ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಜೈಶಂಕರ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಭದ್ರತಾ ಸಂಪುಟ ಸಮಿತಿ ಸಭೆಯ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಸಂಪುಟ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಸೋಮವಾರ ಸಂಜೆ ಇಡೀ ರಾಷ್ಟ್ರವನ್ನೇ ಬೆಚ್ಚಿಬೀಳಿಸಿದ ಕೆಂಪು ಕೋಟೆಯ ಸಮೀಪ ನಡೆದ ಸ್ಫೋಟದಲ್ಲಿ 12 ಜನರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಈ ಸಭೆ ನಡೆಯಲಿದೆ.
ಭೂತಾನ್‌ನಲ್ಲಿ ಗುಡುಗಿದ ಮೋದಿ: ಭೂತಾನ್ ಭೇಟಿಯಲ್ಲಿರುವ ಪ್ರಧಾನಿ ಮೋದಿ, ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಮಾರಕ ಕಾರು ಸ್ಫೋಟದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಇದಕ್ಕೆ ಕಾರಣರಾದವರು "ಕಠಿಣ ಕ್ರಮ" ಎದುರಿಸಬೇಕಾಗುತ್ತದೆ ಎಂದು ಭರವಸೆ ನೀಡಿದರು.
ಭೂತಾನಿನ ರಾಜಧಾನಿ ಥಿಂಪುವಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, "ದೆಹಲಿಯಲ್ಲಿ ಒಂದು ದುರಂತ ಘಟನೆ ನಡೆದಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳ ನೋವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ" ಎಂದು ಹೇಳಿದರು.
ಇಂದು ನಾನು ಭಾರವಾದ ಹೃದಯದಿಂದ ಇಲ್ಲಿಗೆ ಬಂದಿದ್ದೇನೆ. ನಿನ್ನೆ ದೆಹಲಿಯಲ್ಲಿ ನಡೆದ ಘಟನೆ ಎಲ್ಲರನ್ನೂ ಆಘಾತಗೊಳಿಸಿದೆ. ಈ ದುಃಖದ ಸಮಯದಲ್ಲಿ ಇಡೀ ದೇಶವು ಸಂತ್ರಸ್ತ ಕುಟುಂಬಗಳೊಂದಿಗೆ ನಿಂತಿದೆ. ನಿನ್ನೆ ರಾತ್ರಿ, ನಾನು ಸಂಬಂಧಪಟ್ಟ ಎಲ್ಲಾ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದೆ. ನಮ್ಮ ಸಂಸ್ಥೆಗಳು ವಿವಾದದ ಆಳಕ್ಕೆ ಹೋಗುತ್ತವೆ. ಇದರ ಹಿಂದಿರುವ ಕುತಂತ್ರಿಗಳನ್ನು ಸುಮ್ಮನೆ ಬಿಡಲ್ಲ ಎಂದು ಗುಡುಗಿದರು.
ಎನ್‌ಐಎ ತನಿಖೆಗೆ ಆದೇಶ: ರಾಷ್ಟ್ರ ರಾಜಧಾನಿ ದೆಹಲಿ ಸ್ಫೋಟದ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ಆದೇಶಿಸಿದೆ. ದೆಹಲಿಯ ಕೆಂಪುಕೋಟೆ ಸಮೀಪ ಮೊನ್ನೆ (ನ.10) ಸಂಜೆ ಕಾರು ಸ್ಪೋಟಗೊಂಡು 13 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವಂತೆ ಕೇಂದ್ರ ಸರ್ಕಾರವು ಎನ್‌ಐಎ ತನಿಖೆಗೆ ಆದೇಶ ಹೊರಡಿಸಿದೆ.
ಈ ಘಟನೆಯಲ್ಲಿ 29 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೃಹ ಸಚಿವ ಅಮಿತ್ ಶಾ ನಿನ್ನೆ ತಡರಾತ್ರಿ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ಅವರು ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಭೇಟಿ ಮಾಡಿದರು.
ದೆಹಲಿ ಪೊಲೀಸರು, ಎಸ್‌ಎಫ್‌ಎಲ್ ತಂಡ, ಎನ್‌ಐಎ ಮತ್ತು ಎನ್‌ಎಸ್‌ಜಿ ಕೂಡ ಈ ವಿಷಯದ ಬಗ್ಗೆ ತನಿಖೆ ಆರಂಭಿಸಿವೆ. ಹರಿಯಾಣ ಸಂಖ್ಯೆ ಹೊಂದಿರುವ ಐ -20 ಕಾರಿನಲ್ಲಿ ಸ್ಫೋಟ ಸಂಭವಿಸಿದೆ.

