HEALTH TIPS

Delhi Blast: ಜೈಶ್‌-ಎ-ಮೊಹಮ್ಮದ್‌ ಮಹಿಳಾ ಕೆಡರ್‌ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದ ಲಖನೌ ವೈದ್ಯೆ ಬಂಧನ; ಡೇಂಜರ್ ಲೇಡಿ!

ಲಖನೌ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ನಡೆದ ಭೀಕರ ಕಾರು ಬಾಂಬ್‌ ಸ್ಪೋಟದ ಹಿಂದಿನ ಕಾಣದ ಕೈಗಳು ಒಂದೊಂದಾಗಿ ಹೊರಬರುತ್ತಿವೆ. ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆ ಆರಂಭಿಸಿರುವ ಜಮಾತ್-ಉಲ್-ಮೊಮಿನಾತ್‌ ಎಂಬ ಮಹಿಳಾ ವಿಭಾಗ, ಭಾರತದಲ್ಲೂ ತನ್ನ ಹೆಜ್ಜೆ ಮೂಡಲಾರಂಭಿಸಿದ್ದು, ಲಖನೌ ವೈದ್ಯೆ ಡಾ.ಶಾಹೀನ್‌ ಶಾಹೀದ್‌ ಬಂಧನ, ಈ ಮಹಿಳಾ ಕೆಡರ್‌ನ ಭಯಾನಕ ಚಹರೆಯನ್ನು ತೆರೆದಿಟ್ಟಿದೆ.


ಈ ಮಧ್ಯೆ ದೆಹಲಿ ಸ್ಪೋಟಕ್ಕೂ ಮೊದಲು ಹರಿಯಾಣದ ಫರೀದಾಬಾದ್‌ನಲ್ಲಿ ಸಿಕ್ಕ ಭಾರೀ ಸ್ಪೋಟಕಗಳ ಕಳ್ಳಸಾಗಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಉತ್ತರ ಪ್ರದೇಶದ ಲಖನೌ ಮೂಲದ ವೈದ್ಯೆ ಡಾ. ಶಾಹೀನ್‌ ಶಾಹೀದ್‌ ಎಂಬಾಕೆಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ, ಡಾ. ಶಾಹೀನ್‌ ಶಾಹೀದ್‌ ಜೈಶ್‌-ಎ-ಮೊಹಮ್ಮದ್‌ (ಜೆಎಂಎಂ) ಭಯೋತ್ಪಾದಕ ಸಂಘಟನೆಯ ಮಹಿಳಾ ವಿಭಾಗವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತಿದ್ದಳು ಎಂಬ ಸಂಗತಿ ಬಯಲಾಗಿದೆ.

ಭಾರತದಲ್ಲಿ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಮಹಿಳಾ ವಿಭಾಗಕ್ಕೆ, ಮಹಿಳೆಯರನ್ನು ನೇಮಿಸಿಕೊಳ್ಳುವ ಮತ್ತು ಅವರಿಗೆ ತರಬೇತಿ ನೀಡುವ ಜವಾಬ್ದಾರಿಯನ್ನು ಡಾ. ಶಾಹೀನ್‌ ಶಾಹೀದ್‌ಗೆ ವಹಿಸಲಾಗಿತ್ತು. ಫರೀದಾಬಾದ್‌ನಿಂದ ದೆಹಲಿಗೆ ಸ್ಪೋಟಕಗಳನ್ನು ಕಳ್ಳಸಾಗಾಣೆ ಮಾಡುವಲ್ಲಿಯೂ ಈಕೆಯ ಪಾತ್ರವಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಡೇಂಜರ್‌ ಲೇಡಿಸ್:

ಪಾಕಿಸ್ತಾನದಲ್ಲಿ ಜೆಇಎಂ ಸಂಸ್ಥಾಪಕ ಮಸೂದ್ ಅಜರ್ ಸಹೋದರಿ ಸಾದಿಯಾ ಅಜರ್ ನೇತೃತ್ವದಲ್ಲಿ, ಜಮಾತ್ ಉಲ್-ಮೊಮಿನಾತ್‌ ಹೆಸರಿನ ಮಹಿಳಾ ವಿಭಾಗವನ್ನು ರಚನೆ ಮಾಡಲಾಗಿದೆ. ಭಾರತದಲ್ಲಿ ಈ ಮಹಿಳಾ ವಿಭಾಗದ ಕಮಾಂಡ್‌ ಜವಾಬ್ದಾರಿಯನ್ನು ಡಾ. ಶಾಹೀನ್‌ ಶಾಹೀದ್‌ಗೆ ಕೊಡಲಾಗಿತ್ತು.

ಶಾಹೀನ್ ಶಾಹಿದ್ ಲಖನೌ ನಗರದ ಲಾಲ್ ಬಾಗ್ ನಿವಾಸಿಯಾಗಿದ್ದು, ಫರೀದಾಬಾದ್‌ನಲ್ಲಿ 350 ಕೆಜಿ ಸ್ಪೋಟಕಗಳು ಪತ್ತೆಯಾದ ಬಳಿಕ
ಆಕೆಯನ್ನು ಬಂಧಿಸಲಾಯಿತು. ಬಂಧನದ ಸಮಯದಲ್ಲಿ ಆಕೆಯ ಕಾರಿನಿಂದ ಅಸಾಲ್ಟ್ ರೈಫಲ್‌ನ್ನು ವಶಪಡಿಸಿಕೊಳ್ಳಲಾಗಿತ್ತು. ಅಲ್-ಫಲಾಹ್‌ ವಿಶ್ವವಿದ್ಯಾಲಯದ ಲ್ಲಿ ಹಲವರೊಂದಿಗೆ ಸಂಪರ್ಕ ಹೊಂದಿದ್ದ ಡಾ. ಶಾಹೀನ್‌ ಶಾಹೀದ್‌, ಫರಿದಾಬಾದ್‌ ಸ್ಪೋಟಕ ವಶ ಪ್ರಕರಣದಲ್ಲಿ ಬಂಧಿತನಾಗಿರುವ ಕಾಶ್ಮೀರಿ ವೈದ್ಯ ಮುಜಮ್ಮಿಲ್ ಗನೈ ಅಲಿಯಾಸ್ ಮುಸೈಬ್‌ನಿಂದಿಗೂ ನಿಕಟ ಸಂಪರ್ಕ ಹೊಂದಿದ್ದಳುಇ ಎನ್ನಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದ ಕೊಯಿಲ್ ಮೂಲದ ಮುಜಮ್ಮಿಲ್, ದೆಹಲಿಯಿಂದ 45 ಕಿ.ಮೀ ದೂರದ ಧೌಜ್‌ನಲ್ಲಿರುವ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ. ಶ್ರೀನಗರದಲ್ಲಿ ಜೈಶ್-ಎ-ಮೊಹಮ್ಮದ್‌ನ್ನು ಬೆಂಬಲಿಸುವ ಪೋಸ್ಟರ್‌ಗಳನ್ನು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಣಿವೆ ಪೊಲೀಸರು ಮುಜಮ್ಮಿಲ್‌ನನ್ನು ಬಂಧಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದದಂತೆ ಮತ್ತೋರ್ವ ವೈದ್ಯ ಆದಿಲ್‌ ಅಹ್ಮದ್‌ ರಾಥರ್‌ನನ್ನೂ ಕೂಡ ಬಂಧಿಸಲಾಗಿತ್ತು.

ಜಮಾತ್ ಉಲ್-ಮೊಮಿನಾತ್:

ಭಾರತದ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಸಮಯದಲ್ಲಿ ತೀವ್ರ ಪೆಟ್ಟು ತಿಂದಿದ್ದ ಜೈಶ್‌-ಎ-ಮೊಹಮ್ಮದ್‌ ಭಯೋತ್ಪಾದಕ ಸಂಘಟನೆ, ಭಾರತ ಸೇರಿದಂತೆ ಇತರ ದೇಶಗಳಲ್ಲಿ ತನ್ನ ಹೆಜ್ಜೆಗುರುತನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳನ್ನು ಚುರುಕುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಜಮಾತ್-ಉಲ್-ಮೊಮಿನಾತ್ ಎಂಬ ತನ್ನ ಮೊದಲ ಮಹಿಳಾ ವಿಭಾಗದ ರಚನೆಯನ್ನು ಜೆಎಂಎಂ ಘೋಷಿಸಿತ್ತು.

ಅಕ್ಟೋಬರ್ 8ರಿಂದ ಜಮಾತ್ವ-ುಲ್-ಮೊಮಿನಾತ್‌ ಘಟಕಕ್ಕೆ ನೇಮಕಾತಿ ಆರಂಭಿಸಿದ ಜೆಎಂಎಂ, ಪಾಕಿಸ್ತಾನದ ಬಹವಾಲ್ಪುರದ ಮರ್ಕಜ್ ಉಸ್ಮಾನ್-ಒ-ಅಲಿಯಲ್ಲಿ ಮಹಿಳಾ ಭಯೋತ್ಪಾದಕರಿಗೆ ತರಬೇತಿ ಆರಂಭಿಸಿತ್ತು. ಈ ಮಹಿಳಾ ವಿಭಾಗವನ್ನು ಜೆಎಂಎಂ ಸಂಸ್ಥಾಪಕ ಮೌಲಾ ಮಸೂದ್‌ ಅಜರ್‌ನ ಸಹೋದರಿ ಸಾದಿಯಾ ಅಜರ್‌ ಮುನ್ನಡೆಸುತ್ತಿದ್ದಾಳೆ.

ಈ ಗುಂಪು ಜೆಇಎಂ ಕಮಾಂಡರ್‌ಗಳ ಪತ್ನಿಯರನ್ನು ಹಾಗೂ ಬಹವಾಲ್ಪುರ್, ಕರಾಚಿ, ಮುಜಫರಾಬಾದ್, ಕೋಟ್ಲಿ, ಹರಿಪುರ್ ಮತ್ತು ಮನ್ಸೆಹ್ರಾದಲ್ಲಿರುವ ತನ್ನ ಕೇಂದ್ರಗಳಲ್ಲಿ ಅಧ್ಯಯನ ಮಾಡುತ್ತಿರುವ ಆರ್ಥಿಕವಾಗಿ ದುರ್ಬಲ ಮಹಿಳೆಯರನ್ನು ಸೇರಿಸಿಕೊಳ್ಳುತ್ತಿದೆ ಎಂದು ವರದಿಯಾಗಿದೆ.

ಆದರೆ ಡಾ. ಶಾಹೀನ್‌ ಶಾಹೀದ್‌ ಬಂಧನದಿಂದ, ಜಮಾತ್-ಉಲ್‌-ಮೊಮಿನಾತ್‌ ಜಾಲ ಭಾರತದಲ್ಲೂ ಹಬ್ಬಿರುವುದು ಸ್ಪಷ್ಟವಾಗಿದೆ.
ಮಹಿಳೆಯರಿಗಾಗಿ ಆನ್‌ಲೈನ್ ಜಿಹಾದಿ ಕೋರ್ಸ್ ಈಗಾಗಲೇ ಆರಂಭಿಸಲಾಗಿದ್ದು, ನೇಮಕಾತಿ ಮತ್ತು ತರಬೇತಿ ಜವಾಬ್ದಾರಿಗಳನ್ನೂ ಡಾ.ಶಾಹೀನ್‌ ಶಾಹೀದ್‌ ನೋಡಿಕೊಳ್ಳುತ್ತಿದ್ದಳು ಎಂಬುದು ಪೊಲೀಸ್‌ ತನಿಖೆಯಿಂದ ತಿಳಿದುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries