ಕಾಸರಗೋಡು: ವಿವಿಧ ಬೇಡಿಕೆ ಮುಂದಿರಿಸಿ ಪಡಿತರ ವ್ಯಾಪಾರಿಗಳು ಕಾಸರಗೋಡು ತಾಲೂಕು ನಾಗರಿಕ ಸರಬರಾಜು ಕಚೇರಿ ಎದುರು ಧರಣಿ ನಡೆಸಿದರು. ಪಡಿತರ ವ್ಯಾಪಾರಿಗಳ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ಧೋರಣೆ ವಿರೋಧಿಸಿ ಆಲ್ ಕೇರಳ ಚಿಲ್ಲರೆ ಪಡಿತರ ವ್ಯಾಪಾರಿಗಳ ಸಂಘ(ಎಕೆಆರ್‍ಆರ್‍ಡಿಎ) ಕಾಸರಗೋಡು ತಾಲ್ಲೂಕು ಸಮಿತಿಯ ನೇತೃತ್ವದಲ್ಲಿ ಪಡಿತರ ವ್ಯಾಪಾರಿಗಳು ಧರಣಿ ಆಯೋಜಿಸಲಾಗಿತ್ತು.
2018 ರಲ್ಲಿ ಪರಿಚಯಿಸಲಾದ ವೇತನ ಪ್ಯಾಕೇಜ್ ಪರಿಷ್ಕರಿಸಬೇಕು, ಕೆಟಿಪಿಡಿಎಸ್‍ಅಕ್ರಮಗಳನ್ನು ಸರಿಪಡಿಸಬೇಕು, ನ್ಯಾಯಾಲಯದ ಆದೇಶದಂತೆ ಮನೆ ಮನೆಗೆ ಸೀಮೆಎಣ್ಣೆ ವಿತರಿಸಬೇಕು, ಸರ್ಕಾರ ಪಡಿತರ ಕಲ್ಯಾಣ ನಿಧಿ ಪಾಲು ನೀಡಬೇಕು ಮುಂತಾದ ಬೇಡಿಕೆ ಈಡೆರಿಸುವಂತೆ ಒತ್ತಾಯಿಸಿ ಪಡಿತರ ವ್ಯಾಪಾರಿಗಳು ತಾಲ್ಲೂಕು ಸರಬರಾಜು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕಾಸರಗೋಡು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಧರಣಿ ಉದ್ಘಾಟಿಸಿದರು. ಎಕೆಆರ್‍ಆರ್‍ಡಿಎ ಕಾಸರಗೋಡು ತಾಲೂಕು ಅಧ್ಯಕ್ಷ ಬಾಲಕೃಷ್ಣ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಕಾರ್ಯದರ್ಶಿ ಶಂಕರ ಬೆಳ್ಳಿಗೆ, ಜಿಲ್ಲಾ ಉಪಾಧ್ಯಕ್ಷ ವಿಜಯನ್ ನಾಯರ್, ಜಿಲ್ಲಾ ಕೋಶಾಧಿಕಾರಿ ಲೋಹಿತಾಕ್ಷನ್ ನಾಯರ್, ಜಿಲ್ಲಾ ಕಾರ್ಯದರ್ಶಿ ಸಿ.ಕೆ.ಅಬ್ದುಲ್ ಖಾದರ್, ಪಿ.ಎ.ಅಬ್ದುಲ್ ಗಫೂರ್ ಉಪಸ್ಥಿತರಿದ್ದರು. ತಾಲೂಕು ಕಾರ್ಯದರ್ಶಿ ಪ್ರದೀಪ್ ಮಡಕ್ಕಲ್ ಸ್ವಾಗತಿಸಿದರು. ತಾಲೂಕು ಉಪಾಧ್ಯಕ್ಷ ವಸಂತ ಶೆಣೈ ವಂದಿಸಿದರು. ಧರಣಿಗೆ ಮೊದಲು ವ್ಯಾಪಾರಿಗಳಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು.





