HEALTH TIPS

ಇಮ್ರಾನ್ ಖಾನ್ ಆರೋಗ್ಯವಾಗಿದ್ದಾರೆ: ಮಾಜಿ PM ಕುರಿತ ವದಂತಿ ಅಲ್ಲಗಳೆದ ಜೈಲು ಆಡಳಿತ

ಲಾಹೋರ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು 'ಅಡಿಯಾಲಾ ಜೈಲಿನಲ್ಲಿ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ' ಎಂದು ಜೈಲು ಅಧಿಕಾರಿಗಳು ಗುರುವಾರ ಹೇಳಿದ್ದಾರೆ. ಅವರ ಆರೋಗ್ಯದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವದಂತಿಗಳನ್ನು ಅಲ್ಲಗಳೆದಿದ್ದಾರೆ.

'ಇಮ್ರಾನ್ ಅವರ ಆರೋಗ್ಯದ ಬಗ್ಗೆ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ನಾಯಕತ್ವಕ್ಕೆ ಮಾಹಿತಿ ನೀಡಲಾಗಿದೆ. ಅವರ ಆರೈಕೆಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ' ಎಂದು ಅಡಿಯಾಲಾ ಜೈಲು ಆಡಳಿತವು ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.

73 ವರ್ಷದ ಇಮ್ರಾನ್‌ ಅವರು 2023ರ ಆಗಸ್ಟ್‌ನಿಂದ ಜೈಲಿನಲ್ಲಿದ್ದಾರೆ. ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಅವರು 14 ವರ್ಷ ಶಿಕ್ಷೆಗೆ ಗುರಿಯಾಗಿದ್ದಾರೆ.

ಇಮ್ರಾನ್‌ ಅವರು ಜೈಲಿನಲ್ಲಿ ಮೃತಪಟ್ಟಿದ್ದಾರೆ ಎಂಬ ಸುದ್ದಿ 'ಎಕ್ಸ್‌' ಒಳಗೊಂಡಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಬುಧವಾರ ಹರಿದಾಡಿದ್ದವು. ವಿದೇಶಗಳ ಕೆಲವು ಮಾಧ್ಯಮಗಳು ಅವರ ಆರೋಗ್ಯದ ಬಗ್ಗೆ ಹಬ್ಬಿರುವ ವದಂತಿಗಳ ಕುರಿತು ವರದಿ ಮಾಡಿವೆ.

'ಇಮ್ರಾನ್ ಖಾನ್ ಎಲ್ಲಿದ್ದಾರೆ?' ಎಂಬ ಹ್ಯಾಷ್‌ಟ್ಯಾಗ್‌ನಡಿ ಅವರ ಆರೋಗ್ಯಕ್ಕೆ ಸಂಬಂಧಿಸಿದ ವದಂತಿಗಳು ಗುರುವಾರ ಬೆಳಿಗ್ಗೆ 'ಎಕ್ಸ್‌'ನಲ್ಲಿ ಟ್ರೆಂಡಿಂಗ್ ಆಗಿತ್ತು.

ಇಮ್ರಾನ್‌ ಆರೋಗ್ಯದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವದಂತಿಗಳಲ್ಲಿ ಯಾವುದೇ ಹುರುಳಿಲ್ಲ. ಅವರನ್ನು ಅಡಿಯಾಲಾ ಜೈಲಿನಿಂದ ಬೇರೆಡೆಗೆ ಸ್ಥಳಾಂತರ ಮಾಡಲಾಗುತ್ತಿದೆ ಎಂಬ ವರದಿಯಲ್ಲೂ ಸತ್ಯಾಂಶವಿಲ್ಲ ಎಂದು ಜೈಲಿನ ಹೇಳಿಕೆ ತಿಳಿಸಿದೆ.

ಇಮ್ರಾನ್ ಅವರ ಮೂವರು ಸಹೋದರಿಯರಿಗೆ ಅವರನ್ನು ಜೈಲಿನಲ್ಲಿ ಭೇಟಿಯಾಗುವ ಅವಕಾಶವನ್ನು ಅಧಿಕಾರಿಗಳು ನೀಡಿರಲಿಲ್ಲ. ಕಳೆದ ಆರು ವಾರಗಳಲ್ಲಿ ಅವರ ಭೇಟಿಯನ್ನು ಪದೇ ಪದೇ ನಿರಾಕರಿಸಿದ್ದು ಈ ವದಂತಿಗಳು ಹಬ್ಬಲು ಕಾರಣವಾಗಿದೆ. ಭೇಟಿಗೆ ಅವಕಾಶ ನೀಡುವಂತೆ ಕೋರಿ ಕುಟುಂಬದ ಸದಸ್ಯರು ಮತ್ತು ಪಿಟಿಐ ಕಾರ್ಯಕರ್ತರು ಜೈಲಿನ ಹೊರಗೆ ಧರಣಿಯನ್ನೂ ನಡೆಸಿದ್ದರು.

ಭೇಟಿಗೆ ಅವಕಾಶ ನೀಡುವಂತೆ ಒತ್ತಾಯ

ಇಮ್ರಾನ್‌ ಅವರ ಭೇಟಿಗೆ ಅವಕಾಶ ನೀಡಬೇಕು ಎಂದು ಪಿಟಿಐ ಪಕ್ಷ ಗುರುವಾರ ಒತ್ತಾಯಿಸಿದೆ. 'ನ.4ರ ಬಳಿಕ ಇಮ್ರಾನ್‌ ಅವರನ್ನು ಯಾರೂ ಭೇಟಿಯಾಗಿಲ್ಲ. ಭೇಟಿಗೆ ಅವಕಾಶ ನಿರಾಕರಿಸಿದ್ದಕ್ಕೆ ಸ್ಪಷ್ಟ ಕಾರಣವನ್ನೂ ನೀಡಿಲ್ಲ' ಎಂದು ಪಕ್ಷದ ವಕ್ತಾರ ಜುಲ್ಫಿಕರ್‌ ಬುಖಾರಿ ಹೇಳಿದ್ದಾರೆ.

ಜೈಲು ನಿಯಮಗಳ ಪ್ರಕಾರ ಇಮ್ರಾನ್‌ ಅವರಿಗೆ ವಾರಕ್ಕೊಮ್ಮೆಯಾದರೂ ಹೊರಗಿನವರನ್ನು ಭೇಟಿಯಾಗಲು ಅವಕಾಶವಿದೆ. ಆದರೂ ಜೈಲು ಅಧಿಕಾರಿಗಳು ಇಂತಹ ಭೇಟಿಗೆ ಅವಕಾಶ ನೀಡದೆಯೂ ಇರಬಹುದು. ಇದೀಗ ಹೊರಗಿನವರನ್ನು ಭೇಟಿಯಾಗಲು ಅವಕಾಶ ನೀಡದೆ ಹಲವು ವಾರಗಳು ಕಳೆದಿವೆ ಎಂದು ಪಕ್ಷ ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries