HEALTH TIPS

SIR ಕರ್ತವ್ಯನಿರತ ಮತ್ತೊಬ್ಬ BLO ಸಾವು: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕೆಸರೆರಚಾಟ

 ಕೋಲ್ಕತ್ತ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಬೂತ್‌ ಮಟ್ಟದ ಅಧಿಕಾರಿಯೊಬ್ಬರು (ಬಿಎಲ್‌ಒ) ಮುರ್ಷಿದಾಬಾದ್‌ ಜಿಲ್ಲೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅತಿಯಾದ ಕೆಲಸದ ಒತ್ತಡವೇ ಅವರ ಸಾವಿಗೆ ಕಾರಣ ಎಂದು ಕುಟುಂಬದವರು ಆರೋಪಿಸಿದ್ದಾರೆ.


ಎಸ್‌ಐಆರ್‌ ಪ್ರಕ್ರಿಯೆ ನವೆಂಬರ್‌ 4ರಂದು ಆರಂಭವಾದಾಗಿನಿಂದ ರಾಜ್ಯದಲ್ಲಿ ವರದಿಯಾದ ನಾಲ್ಕನೇ ಪ್ರಕರಣ ಇದಾಗಿದೆ. ಇದರ ಬೆನ್ನಲ್ಲೇ, ರಾಜಕೀಯ ಕೆಸರೆರಚಾಟ ಶುರುವಾಗಿದೆ.

ಮೃತ ಅಧಿಕಾರಿಯನ್ನು, ಪ್ರಾಥಮಿಕ ಶಾಲಾ ಶಿಕ್ಷಕ ಝಾಕಿರ್‌ ಹುಸೇನ್‌ ಎಂದು ಗುರುತಿಸಲಾಗಿದೆ.

ತೀವ್ರ ಎದೆ ನೋವಿನಿಂದ ಬಳಲುತ್ತಿದ್ದ ಝಾಕಿರ್‌ ಅವರು ಗುರುವಾರ ಮಧ್ಯಾಹ್ನ ಕುಸಿದು ಬಿದ್ದಿದ್ದರು. ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅವರು ಅದೇ ದಿನ ರಾತ್ರಿ ಮೃತಪಟ್ಟಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಎಸ್‌ಐಆರ್‌ ಕರ್ತವ್ಯದ ಜೊತೆಗೆ, ಶೈಕ್ಷಣಿಕ ಕೆಲಸಗಳನ್ನೂ ನಿರ್ವಹಿಸುತ್ತಿದ್ದ ಕಾರಣ, ಝಾಕಿರ್‌ ಅವರ ಮೇಲೆ ಅತಿಯಾದ ಒತ್ತಡ ಉಂಟಾಗಿತ್ತು ಎಂದು ಸಂಬಂಧಿಕರು ಹೇಳಿದ್ದಾರೆ. ಅವರನ್ನು ಹೆಚ್ಚುವರಿ ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಪದೇ ಪದೇ ಮನವಿ ಮಾಡಿದರೂ, ಶಾಲಾಧಿಕಾರಿಗಳು ನಿರಾಕರಿಸಿದ್ದರು. ಏಕಕಾಲದಲ್ಲಿ ಎರಡೂ ಕೆಲಸ ನಿರ್ವಹಿಸಬೇಕಿದ್ದ ಕಾರಣ, ಒತ್ತಡ ಹೆಚ್ಚಾಗಿತ್ತು ಎಂದು ದೂರಿದ್ದಾರೆ.

ಝಾಕಿರ್‌ ಅವರಿಗಿಂತ ಮೊದಲು, ಮೂವರು ಬಿಎಲ್‌ಒಗಳು ಮೃತಪಟ್ಟಿದ್ದರು. ಪೂರ್ಬಾ ಬರ್ಧಮಾನ್‌ ಜಿಲ್ಲೆಯಲ್ಲಿ ಒಬ್ಬರು ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದರೆ, ನಾದಿಯಾ ಜಿಲ್ಲೆಯ ಚಪ್ರಾದ ಒಬ್ಬರು ಮತ್ತು ಜಲ್ಪಾಯಿಗುರಿಯ ಮಲಬಜಾರ್‌ನ ಮತ್ತೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಪ್ರಕರಣಗಳು ರಾಜಕೀಯ ಆರೋಪ, ಪ್ರತ್ಯಾರೋಪಗಳಿಗೆ ಎಡೆ ಮಾಡಿಕೊಟ್ಟಿವೆ.

ಚುನಾವಣಾ ಆಯೋಗವು, ಸರಿಯಾಗಿ ಯೋಜಿಸದೆ ಬಿಎಲ್‌ಒಗಳ ಮೇಲೆ ಅಮಾನವೀಯ ರೀತಿಯಲ್ಲಿ ಕೆಲಸದ ಹೊರೆ ಹಾಕುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಹಾಗೆಯೇ, ಎಸ್‌ಐಆರ್‌ಗೆ ನಿಯೋಜನೆಗೊಂಡಿರುವ ಕನಿಷ್ಠ 10 ಬಿಎಲ್‌ಒಗಳು ಅನಾರೋಗ್ಯಕ್ಕೀಡಾಗಿ ಆಸ್ಪತ್ರೆ ಸೇರಿದ್ದಾರೆ ಎಂದಿದ್ದಾರೆ.

ಈ ಆರೋಪಗಳನ್ನು ತಳ್ಳಿಹಾಕಿರುವ ಬಿಜೆಪಿ, ಚುನಾವಣಾ ಆಯೋಗದ ಆದೇಶಗಳಿಂದಾಗಿ ಬಿಎಲ್‌ಒಗಳು ಒತ್ತಡ ಅನುಭವಿಸುತ್ತಿಲ್ಲ. ಅವರು, ರಾಜ್ಯದಲ್ಲಿ ಅಧಿಕಾರದಲ್ಲಿರುವ ಟಿಎಂಸಿ ಹೇರುತ್ತಿರುವ ರಾಜಕೀಯ ಮತ್ತು ಆಡಳಿತಾತ್ಮಕ ಒತ್ತಡದಿಂದ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ಪ್ರತಿಪಾದಿಸಿದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries