ಮೀರಠ್: ಉತ್ತರಪ್ರದೇಶದಲ್ಲಿ ಜಾರಿಯಲ್ಲಿರುವ ಮತಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ನಿರತರಾಗಿದ್ದ ಬ್ಲಾಕ್ ಮಟ್ಟದ ಅಧಿಕಾರಿ (ಬಿಎಲ್‌ಓ) ಯೊಬ್ಬರು ಬರೇಲಿಯಲ್ಲಿ ಮೆದುಳು ರಕ್ತಸ್ರಾವ (ಬ್ರೈನ್ ಹ್ಯಾಮರೇಜ್) ದಿಂದ ಮೃತಪಟ್ಟಿದ್ದಾರೆ.
ಮೀರಠ್ನಲ್ಲಿ ಎಸ್‌ಐಆರ್ ಕೆಲಸದ ಒತ್ತಡ ತಾಳಲಾರದೇ ಪ್ರಾಥಮಿಕ ಶಾಲೆ ಶಿಕ್ಷಕಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದರಿಂದಾಗಿ ಎಸ್‌ಐಆರ್ ಕಾರ್ಯ ಆರಂಭವಾದ ಬಳಿಕ 12 ದಿನಗಳಲ್ಲಿ ಮೃತಪಟ್ಟ ಬಿಎಲ್‌ಓಗಳ ಸಂಖ್ಯೆ 10ಕ್ಕೇರಿದೆ. ಈ ಪೈಕಿ ಮೂವರು ಆತ್ಮಹತ್ಯೆ ಮಾಡಿಕೊಂಡವರು.
ಬರೇಲಿಯಲ್ಲಿ ಎಂಬಿ ಇಂಟರ್ ಕಾಲೇಜು ವಕ್ತಾರ ಮತ್ತು ಬಿಎಲ್‌ಓ ಅಜಯ್ ಅಗರ್ವಾಲ್ (51) ಎಸ್‌ಐಆರ್ ಕರ್ತವ್ಯ ಮುಗಿಸಿ ಮನೆಗೆ ತಲುಪಿದ ಬಳಿಕ ಸೋಮವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. ನವೆಂಬರ್ 24ರಂದು ಇವರಿಗೆ ಡಾಟಾ ಒದಗಿಸುವ ಕೆಲಸ ವಹಿಸಿದ ಬಳಿಕ ತೀವ್ರ ಒತ್ತಡದಿಂದ ಇದ್ದರು ಎಂದು ಕುಟುಂಬದವರು ಆಪಾದಿಸಿದ್ದಾರೆ. ಮೊಬೈಲ್ ಫೋನ್ನಲ್ಲಿ ಇದನ್ನು ಪೂರ್ಣಗೊಳಿಸಲು ಹೆಣಗಾಡುತ್ತಿದ್ದರು ಎಂದು ಕುಟುಂಬದವರು ಹೇಳಿದ್ದಾರೆ.
"ಆಯಂಡ್ರಯ್ಡ್ ಫೋನ್ ಬಳಸುವುದು ಕೂಡಾ ತನಗೆ ಗೊತ್ತಿಲ್ಲ ಎಂದು ಅವರು ಅಧಿಕಾರಿಗಳಿಗೆ ಹೇಳಿದ್ದರು. ಆದ್ದರಿಂದ ಡಾಟಾ ಅಪ್ಲೋಡ್ ಮಾಡುವುದೂ ಅವರಿಗೆ ಕಷ್ಟವಾಗುತ್ತಿತ್ತು. ಆದರೆ ಇದನ್ನು ಯಾರೂ ಕಿವಿಗೆ ಹಾಕಿಕೊಳ್ಳಲಿಲ್ಲ; ಬದಲಾಗಿ ಬೈಯ್ಯುತ್ತಿದ್ದರು. ನಿಭಾಯಿಸಲು ಸಾಧ್ಯವಾಗದಷ್ಟು ಕೆಲಸದ ಹೊರೆ ಅಧಿಕವಾಗುತ್ತಿದೆ ಎಂದು ಹೇಳುತ್ತಿದ್ದರು" ಎಂದು ಪುತ್ರ ಪ್ರಭಾಕರ್ ವಿವರಿಸಿದ್ದಾರೆ.
ಮೀರಠ್ನಲ್ಲಿ ನೀರಾವರಿ ಇಲಾಖೆ ಗುಮಾಸ್ತ ಹಾಗೂ ಬಿಎಲ್‌ಓ, 35 ವರ್ಷ ವಯಸ್ಸಿನ ಮೋಹಿತ್ ಕುಮಾರ್ ಮಂಗಳವಾರ ರಾತ್ರಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಿರಿಯ ಅಧಿಕಾರಿಗಳಿಂದ ಇದ್ದ ಒತ್ತಡ ಇದಕ್ಕೆ ಕಾರಣ ಎಂದು ಪತ್ನಿ ಆಪಾದಿಸಿದ್ದಾರೆ.




