HEALTH TIPS

ಪುಟಿನ್‌ ಆಗಮನಕ್ಕೂ ಮುನ್ನ ವಿಪಕ್ಷ ನಾಯಕರ ಭೇಟಿಗೆ ನಿರಾಕರಣೆ | ಸರಕಾರಕ್ಕೆ ಅಭದ್ರತೆ ಕಾಡುತ್ತಿದೆ: ರಾಹುಲ್ ಗಾಂಧಿ ಟೀಕೆ

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ ಅವರ ಭಾರತ ಪ್ರವಾಸಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ, ವಿದೇಶಿ ಗಣ್ಯರು ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗುವುದನ್ನು ಕೇಂದ್ರ ಸರ್ಕಾರ ತಡೆಯುತ್ತಿದೆ ಎಂಬ ಗಂಭೀರ ಆರೋಪವನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿದ್ದಾರೆ.

ಸರ್ಕಾರದ ಈ ನಿಲುವು "ಅಭದ್ರತೆಯ ಸಂಕೇತ" ಎಂದು ಅವರು ಖಂಡಿಸಿದ್ದಾರೆ.

ಸಂಸತ್‌ ಭವನ ಸಂಕೀರ್ಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ರಾಹುಲ್ ಗಾಂಧಿ, ವಿದೇಶಿ ನಾಯಕರು ಭಾರತ ಪ್ರವಾಸದ ವೇಳೆ ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗುವುದು ದಶಕಗಳ ಸಂಪ್ರದಾಯವಾಗಿದ್ದು, ಅಟಲ್‌ ಬಿಹಾರಿ ವಾಜಪೇಯಿ ಮತ್ತು ಮನಮೋಹನ್‌ ಸಿಂಗ್‌ ಅವರ ಆಡಳಿತಕಾಲದಲ್ಲಿಯೂ ಇದು ಜಾರಿಯಲ್ಲಿತ್ತು ಎಂದು ಹೇಳಿದರು.

"ವಿದೇಶಿ ಗಣ್ಯರು ಬಂದಾಗ ಅಥವಾ ನಾನು ವಿದೇಶಕ್ಕೆ ಹೋದಾಗ, ಸರಕಾರವು 'ಎಲ್‌ಒಪಿ ಅವರನ್ನು ಭೇಟಿಯಾಗಬೇಡಿ' ಎಂದು ಸೂಚಿಸುತ್ತದೆ. ಇದು ನಿರಂತರವಾಗಿ ನಡೆಯುತ್ತಿದೆ. ಇದರರ್ಥ ವಿರೋಧ ಪಕ್ಷದ ನಾಯಕರನ್ನು ದೂರವಿಡಿ," ಎಂದು ರಾಹುಲ್ ಗಾಂಧಿ ಆಕ್ಷೇಪಿಸಿದರು.

ವಿರೋಧ ಪಕ್ಷದ ನಾಯಕರೂ ದೇಶವನ್ನು ಪ್ರತಿನಿಧಿಸುತ್ತಾರೆ ಎಂಬುವುದನ್ನು ಉಲ್ಲೇಖಿಸಿದ ಅವರು, "ಸರಕಾರ ಮಾತ್ರ ಭಾರತವಲ್ಲ. ಮತ್ತೊಂದು ದೃಷ್ಟಿಕೋನವನ್ನು ವಿದೇಶಿ ನಾಯಕರಿಗೆ ತಿಳಿಸುವ ಜಾಗವನ್ನು ಸರಕಾರ ಬಯಸುವುದಿಲ್ಲ. ಇದು ರೂಢಿ, ಆದರೆ ಪ್ರಧಾನಿ ಮೋದಿ ಮತ್ತು ವಿದೇಶಾಂಗ ಸಚಿವಾಲಯ ಇದನ್ನು ಅನುಸರಿಸುತ್ತಿಲ್ಲ ಎಂದು ಟೀಕಿಸಿದರು.

ಸರಕಾರ ಹೀಗೆ ವರ್ತಿಸುವುದಕ್ಕೆ ಕಾರಣ ಏನು ಎಂಬ ಪ್ರಶ್ನೆಗೆ ರಾಹುಲ್ ಗಾಂಧಿ, "ಅವರಿಗೆ ಅಭದ್ರತೆ ಕಾಡುತ್ತಿದೆ" ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ರಷ್ಯಾ ಅಧ್ಯಕ್ಷ ಪುಟಿನ್‌ ಗುರುವಾರ ಸಂಜೆ ಭಾರತಕ್ಕೆ ಆಗಮಿಸಲಿದ್ದು, ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಶೃಂಗಸಭೆ ನಡೆಯಲಿದೆ. ಈ ವೇಳೆ ರಕ್ಷಣಾ ಸಹಕಾರ ವಿಸ್ತರಣೆ, ದ್ವಿಪಕ್ಷೀಯ ವ್ಯಾಪಾರವನ್ನು ಬಾಹ್ಯ ಒತ್ತಡಗಳಿಂದ ಪ್ರತ್ಯೇಕಿಸುವ ಕ್ರಮಗಳು ಮತ್ತು ಸ್ಮಾಲ್‌ ಮಾಡ್ಯುಲರ್‌ ರಿಯಾಕ್ಟರ್‌ ಕ್ಷೇತ್ರದಲ್ಲಿ ಸಹಕಾರ ವಿಚಾರ ಸೇರಿದಂತೆ ಹಲವು ಪ್ರಮುಖ ವಿಷಯಗಳು ಚರ್ಚೆಗೆ ಬರಲಿವೆ ಎಂದು ತಿಳಿದುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries