ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು ಆಸಿಡ್ ದಾಳಿಯಿಂದ ಬದುಕುಳಿದವರ ಪರವಾಗಿ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸುತ್ತಿತ್ತು. ವಿಚಾರಣೆಯ ವೇಳೆ, 2009ರಲ್ಲಿ ಆಸಿಡ್ ದಾಳಿಗೆ ಗುರಿಯಾದ ದಿಲ್ಲಿಯಲ್ಲಿ ಬದುಕುಳಿದ ಮಹಿಳೆ ವೈಯಕ್ತಿಕವಾಗಿ ಹಾಜರಾಗಿ, 16 ವರ್ಷ ಕಳೆದರೂ ವಿಚಾರಣೆ ಇನ್ನೂ ಮುಗಿದಿಲ್ಲ ಎಂಬ ನೋವನ್ನು ಹಂಚಿಕೊಂಡರು.
"2009ರಲ್ಲಿ ನನ್ನ ಮೇಲೆ ದಾಳಿ ನಡೆದಿದೆ, ಇಂದಿಗೂ ವಿಚಾರಣೆ ಮುಂದುವರಿಯುತ್ತಿದೆ," ಎಂದು ಅವರು ಹೇಳಿದರು.
2013ರವರೆಗೆ ಪ್ರಕರಣ ಯಾವುದೇ ಪ್ರಗತಿಯನ್ನೂ ಕಾಣದೆ ನಿಂತಿದ್ದುದನ್ನು ಪೀಠ ಗಮನಕ್ಕೆ ತಂದುಕೊಂಡಿತು. ಪ್ರಸ್ತುತ ರೋಹಿಣಿ ನ್ಯಾಯಾಲಯದಲ್ಲಿ ವಿಚಾರಣೆ ಅಂತಿಮ ಹಂತದಲ್ಲಿದೆ. ತೀರ್ಪು ಇನ್ನೂ ಬಂದಿಲ್ಲ ಎಂದು ತಿಳಿದಾಗ ಪೀಠ ತೀವ್ರ ಆಕ್ರೋಶ ವ್ಯಕ್ತಪಡಿಸಿತು.
"ರಾಷ್ಟ್ರದ ರಾಜಧಾನಿಯಲ್ಲಿಯೇ 16 ವರ್ಷಗಳಲ್ಲಿ ಆಸಿಡ್ ದಾಳಿ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ, ದೇಶದ ಇತರ ಭಾಗಗಳ ಸ್ಥಿತಿ ಹೇಗಿರಬಹುದು? ಇದು ಸಮಗ್ರ ವ್ಯವಸ್ಥೆಗೆ ನಾಚಿಕೆಗೇಡು!" ಎಂದು ಸಿಜೆಐ ಸೂರ್ಯ ಕಾಂತ್ ಅಚ್ಚರಿ ವ್ಯಕ್ತಪಡಿಸಿದರು.
ಡಾ. ಪರ್ಮಿಂದರ್ ಕೌರ್ ಎಂಬ ನ್ಯಾಯಾಧೀಶರು ಈ ವಿಷಯವನ್ನು ಪುನರಾರಂಭಿಸುವವರೆಗೂ ವ್ಯವಸ್ಥೆಯಲ್ಲಿನ ಎಲ್ಲಾ ಭರವಸೆಯನ್ನು ಕಳೆದುಕೊಂಡಿದ್ದೆ ಎಂದು ಅರ್ಜಿದಾರರು ಹೇಳಿದರು. ತಮ್ಮ ಪ್ರಕರಣದ ಜೊತೆಗೆ ಇತರ ಬದುಕುಳಿದವರ ನೆರವಿಗಾಗಿ ಕೆಲಸ ಮಾಡುತ್ತಿರುವುದಾಗಿ ಅರ್ಜಿದಾರರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, ವಿಚಾರಣೆಯನ್ನು ದಿನನಿತ್ಯದ ಆಧಾರದ ಮೇಲೆ ನಡೆಸುವುದೇ ಸೂಕ್ತ ಎಂದು ಅಭಿಪ್ರಾಯ ಪಟ್ಟರು ಮತ್ತು ಅದಕ್ಕಾಗಿ ಅರ್ಜಿ ಸಲ್ಲಿಸಲು ಸಂತ್ರಸ್ತೆಗೆ ಸೂಚಿಸಿದರು.
ಪೀಠವು ಬಲವಂತವಾಗಿ ಆಸಿಡ್ ಸೇವಿಸಲು ಒತ್ತಾಯಿಸುವ ದಾಳಿಗಳನ್ನೂ ಉಲ್ಲೇಖಿಸಿತು. ಇಂತಹ ದಾಳಿಗಳಿಂದ ಅನೇಕರು ಜೀವನ ಪರ್ಯಂತದ ಗಂಭೀರ ಅಂಗವೈಕಲ್ಯಕ್ಕೆ ಒಳಗಾಗುತ್ತಿರುವುದರ ಬಗ್ಗೆ ಸಿಜೆಐ ವಿಷಾದಿಸಿದರು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರತಿಕ್ರಿಯಿಸಿ, ಇಂತಹ ಪ್ರಕರಣಗಳನ್ನು ಅಂಗವಿಕಲರ ಹಕ್ಕುಗಳ ಕಾಯ್ದೆ, 2016ರಡಿ ಅಂಗವೈಕಲ್ಯವೆಂದು ಪರಿಗಣಿಸಬಹುದು ಎಂದು ಹೇಳಿದರು. ಆಸಿಡ್ ದಾಳಿಯಿಂದ ಬದುಕುಳಿದವರನ್ನು ಸ್ಪಷ್ಟವಾಗಿ ಒಳಗೊಳ್ಳುವಂತೆ ಕಾಯ್ದೆಗೆ ತಿದ್ದುಪಡಿ ಪ್ರಸ್ತಾಪಿಸುವ ವಿಚಾರವನ್ನು ಪರಿಗಣಿಸಲು ಸಿಜೆಐ ಸೂಚಿಸಿದರು. ಎಸ್‌ಜಿ ಮೆಹ್ತಾ ಈ ಸಲಹೆಗೆ ಸಕಾರಾತ್ಮಕವಾಗಿ ಸ್ಪಂದಿಸಿದರು.




