ನವದೆಹಲಿ: ಚಳಿಗಾಲದ ಅಧಿವೇಶನದ ನಾಲ್ಕನೆ ದಿನವಾದ ಗುರುವಾರ ದಿಲ್ಲಿಯಲ್ಲಿನ ವಾಯು ಮಾಲಿನ್ಯದ ವಿರುದ್ಧ ವಿರೋಧ ಪಕ್ಷಗಳು ಸಂಸತ್ ಭವನದ ಸಂಕೀರ್ಣದ ಎದರು ಪ್ರತಿಭಟನೆ ನಡೆಸಿದೆ.
ಸಂಸತ್ತಿನ ಮಕರ ದ್ವಾರದ ಹೊರಗೆ ವಿವಿಧ ಪಕ್ಷಗಳ ನಾಯಕರು ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ, ಪ್ರಧಾನಿ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಿ ವಾಯು ಮಾಲಿನ್ಯದ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮಕ್ಕಳ ಪ್ರಾಣಕ್ಕೆ ಸಮಸ್ಯೆಯಾಗುತ್ತಿರುವುದರಿಂದ ಏನಾದರೂ ಮಾಡುವುದು ಸರಕಾರದ ಜವಾಬ್ದಾರಿಯಾಗಿದೆ. ನನ್ನಂತಹ ವಯಸ್ಕರು ಕೂಡ ಕಷ್ಟಪಡುತ್ತಿದ್ದಾರೆ. ದಿಲ್ಲಿ ವಾಯು ಮಾಲಿನ್ಯದ ಬಗ್ಗೆ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಸೋನಿಯಾ ಗಾಂಧಿ ಪ್ರತಿಭಟನೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.
ಗುರುವಾರ ದಿಲ್ಲಿಯ ವಾಯು ಗುಣಮಟ್ಟ ಸೂಚ್ಯಂಕ ಕಳಪೆಗೆ ತಲುಪಿದ್ದು, ವಾಯು ಗುಣಮಟ್ಟದ ಸೂಚ್ಯಂಕ 299ಕ್ಕೆ ಇಳಿಕೆಯಾಗಿತ್ತು. ದಿಲ್ಲಿ-ಎನ್‌ಸಿಆರ್ ಪ್ರದೇಶ ಹಾಗೂ ಉತ್ತರ ಭಾರತದ ಇನ್ನಿತರ ಭಾಗಗಳಲ್ಲಿ ಏರಿಕೆಯಾಗುತ್ತಿರುವ ವಾಯು ಮಾಲಿನ್ಯದ ಕುರಿತು ಚರ್ಚಿಸಲು ಕಾಂಗ್ರೆಸ್ ಸಂಸದರಾದ ಮಾಣಿಕಂ ಟ್ಯಾಗೋರ್, ಮನೀಶ್ ತಿವಾರಿ ಹಾಗೂ ವಿಜಯ್ ಕುಮಾರ್ ಅಲಿಯಾಸ್ ವಿಜಯ್ ವಸಂತ್ ಸಂಸತ್ತಿನಲ್ಲಿ ಕಲಾಪ ಮುಂದೂಡಿಕೆ ನಿರ್ಣಯವನ್ನೂ ಮಂಡಿಸಿದರು.
ಈ ನಡುವೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರೋಗ್ಯ ವಿಮೆಯಿಂದ ರಾಷ್ಟ್ರೀಯ ಭದ್ರತಾ ಸೆಸ್ ಮಸೂದೆ-2025 ಅನ್ನು ಸಂಸತ್ತಿನಲ್ಲಿ ಮಂಡಿಸಿದರು. ಈ ಮಸೂದೆಯು ರಾಷ್ಟ್ರೀಯ ಭದ್ರತೆ ಹಾಗೂ ಸಾರ್ವಜನಿಕ ಆರೋಗ್ಯದ ವೆಚ್ಚಕ್ಕಾಗಿ ಸಂಪನ್ಮೂಲ ಕ್ರೋಡೀಕರಿಸಲು ಸರಕುಗಳ ಮೇಲೆ ಸೆಸ್ ವಿಧಿಸುವ ಗುರಿಯನ್ನು ಹೊಂದಿದೆ.
ಸೋಮವಾರದಿಂದ ಪ್ರಾರಂಭಗೊಂಡಿರುವ ಚಳಿಗಾಲದ ಸಂಸತ್ ಅಧಿವೇಶನ ಡಿಸೆಂಬರ್ 19ರಂದು ಮುಕ್ತಾಯಗೊಳ್ಳಲಿದೆ.




