ಇಂಡಿಗೊ ವಿಮಾನ ಯಾನ ಸಂಸ್ಥೆಯ ವಿಮಾನಗಳ ಹಾರಾಟ ದಿಲ್ಲಿ, ಮುಂಬೈ, ಹೈದರಾಬಾದ್, ಬೆಂಗಳೂರು ಹಾಗೂ ಅಹ್ಮದಾಬಾದ್ ಸೇರಿದಂತೆ ವಿವಿಧ ನಗರಗಳಲ್ಲಿ ವ್ಯತ್ಯಯಗೊಂಡಿದ್ದರಿಂದ ಸಾವಿರಾರು ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಪರದಾಡುತ್ತಿರುವ ದೃಶ್ಯಗಳು ಕಂಡು ಬಂದವು.
ದಿಲ್ಲಿಯಿಂದ ನಿರ್ಗಮಿಸಬೇಕಿದ್ದ 30ಕ್ಕೂ ಹೆಚ್ಚು ವಿಮಾನಗಳ ಕಾರ್ಯಾಚರಣೆಯನ್ನು ಗುರುವಾರ ಮುಂಜಾನೆ ರದ್ದುಗೊಳಿಸಲಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿರುವ ಇಂಡಿಗೊ ವಿಮಾನ ಯಾನ ಸಂಸ್ಥೆಯ ವಕ್ತಾರರೊಬ್ಬರ ಪ್ರಕಾರ, 73 ಇಂಡಿಗೊ ವಿಮಾನಗಳ ಹಾರಾಟವನ್ನು ಗುರುವಾರ ರದ್ದುಗೊಳಿಸಲಾಗಿದೆ. ಮುಂಬೈ ವಿಮಾನ ನಿಲ್ದಾಣದಲ್ಲೂ ಹಲವು ವಿಮಾನಗಳ ಹಾರಾಟ ರದ್ದುಗೊಂಡವು.
ಸುಮಾರು 170 ಇಂಡಿಗೊ ವಿಮಾನಗಳ ಹಾರಾಟ ಗುರುವಾರ ರದ್ದಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ ಎಂದು ndtv.com ವರದಿ ಮಾಡಿದೆ.
ಇಂಡಿಗೊ ವಿಮಾನಗಳ ರದ್ದತಿಯಿಂದ ಆಗಿರುವ ತೊಂದರೆಯ ಕುರಿತು ಓರ್ವ ಎಕ್ಸ್ ಬಳಕೆದಾರರು ಪೋಸ್ಟ್ ಮಾಡಿದ್ದು, " ನಾವು ನಿನ್ನೆ (ಬುಧವಾರ) ಸಂಜೆಯಿಂದ ಗುರುವಾರ ಬೆಳಗ್ಗೆ 9 ಗಂಟೆಯವರೆಗೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಸುಮಾರು 12 ಗಂಟೆಯಿಂದ ಕಾಯತ್ತಿದ್ದೇವೆ. ಇದುವರೆಗೂ ಪುಣೆಗೆ ತೆರಳಬೇಕಿರುವ ವಿಮಾನದ ಬಗ್ಗೆ ಇಂಡಿಗೊ ವಿಮಾನ ಯಾನ ಸಂಸ್ಥೆಯಿಂದ ಯಾವುದೇ ಮಾಹಿತಿ ದೊರೆತಿಲ್ಲ. ಈ ಪರಿಸ್ಥಿತಿಯಿಂದ ನಮಗೆ ಗಮನಾರ್ಹ ಅನನುಕೂಲವಾಗಿದೆ" ಎಂದು ಅಳಲು ತೋಡಿಕೊಂಡಿದ್ದಾರೆ.




