ಸೂರತ್: 10ನೇ ಮಹಡಿಯಿಂದ ಜಾರಿಬಿದ್ದ 57 ವರ್ಷದ ವ್ಯಕ್ತಿಯೊಬ್ಬರು, 8ನೇ ಮಹಡಿಯಲ್ಲಿ ಕಿಟಕಿಯ ಹೊರಗೆ ಅಳವಡಿಸಿದ್ದ ಕಬ್ಬಿಣದ ಗ್ರಿಲ್‌ಗೆ ಸಿಲುಕಿ, ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ನಿತಿನ್ ಆದಿಯಾ ಎಂಬವರೇ ಆ ಅದೃಷ್ಟವಂತ.
ರಕ್ಷಣೆಗೂ ಮುನ್ನ ಅವರು ಸುಮಾರು ಒಂದು ಗಂಟೆವರೆಗೆ ತಲೆಕೆಳಗಾಗಿ ನೇತಾಡುತ್ತಿದ್ದರು ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.
ನಿತಿನ್ ಅವರು ಸಿಲುಕಿಕೊಂಡಿದ್ದ ಹಾಗೂ ಅವರನ್ನು ರಕ್ಷಣೆ ಮಾಡಿದ ಸಂದರ್ಭದ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಜಹಂಗಿರಾಬಾದ್ ಪ್ರದೇಶದಲ್ಲಿರುವ ಟೈಮ್ಸ್ ಗ್ಯಾಲಕ್ಸಿ ಕಟ್ಟಡದ ಫ್ಲಾಟ್‌ನಲ್ಲಿ ವಾಸವಿರುವ ನಿತಿನ್ ಅವರು ಕಿಟಕಿ ಪಕ್ಕದಲ್ಲಿ ಮಲಗಿದ್ದಾಗ, ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಾರೆ. ಆದರೆ, 8ನೇ ಮಹಡಿಯಲ್ಲಿ ಕಿಟಕಿಯ ಹೊರಗೆ ಹಾಕಿದ್ದ ಗ್ರಿಲ್‌ಗೆ ಸಿಲುಕಿಕೊಂಡ ಕಾರಣ, ಕೆಳಗೆ ಬೀಳದೆ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಿಗ್ಗೆ 8ಕ್ಕೆ ತುರ್ತು ಕರೆ ಬರುತ್ತಿದ್ದಂತೆ ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಕೂಡಲೇ, ನಿತಿನ್ ಅವರನ್ನು ಗುರುಕುಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

