ಸಿದ್ದೀಕಿಯನ್ನು ನ.19ರಂದು 13 ದಿನಗಳ ಅವಧಿಗೆ ಜಾರಿ ನಿರ್ದೇಶನಾಲಯದ (ಈ.ಡಿ.) ಕಸ್ಟಡಿಗೆ ನೀಡಲಾಗಿದ್ದು, ಸೋಮವಾರ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿತ್ತು.
ವಿಚಾರಣೆ ಸಂದರ್ಭದಲ್ಲಿ ಸಿದ್ದೀಕಿ ಪರ ವಕೀಲರು ತನ್ನ ಕಕ್ಷಿದಾರರರಿಗೆ ಕಸ್ಟಡಿಯಲ್ಲಿ ಔಷಧಿಗಳು ಮತ್ತು ಕನ್ನಡಕ ಲಭ್ಯತೆಯನ್ನು ಕೋರಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯವು ಪುರಸ್ಕರಿಸಿತು.
ಯುಜಿಸಿ ಮಾನ್ಯತೆಯನ್ನು ಪಡೆದುಕೊಂಡಿರುವುದಾಗಿ ಅಲ್ ಫಲಾಹ್ ವಿವಿಯು ಸುಳ್ಳು ಹೇಳಿದೆ ಮತ್ತು ತನ್ನ ನ್ಯಾಕ್ ಮಾನ್ಯತೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿ ನೀಡಿದೆ ಎಂದು ಈಡಿ ಈ ಮೊದಲು ಆರೋಪಿಸಿತ್ತು. ಹಣಕಾಸು ದಾಖಲೆಗಳು ವಿವಿಯು ಸಂಪಾದಿಸಿದ ಆಸ್ತಿಗಳಿಗೆ ತಾಳೆಯಾಗದಿದ್ದರೂ ಅದು 2018 ಮತ್ತು 2025ರ ನಡುವೆ 415.10 ಕೋ.ರೂ.ಗಳ ಆದಾಯವನ್ನು ಗಳಿಸಿತ್ತು ಎಂದು ಈಡಿ ಹೇಳಿತ್ತು.
ಸಿದ್ದೀಕಿ ಅಲ್ ಫಲಾಹ್ ಚ್ಯಾರಿಟೇಬಲ್ ಟ್ರಸ್ಟ್ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿದ್ದು, ವಿದ್ಯಾರ್ಥಿಗಳಿಂದ ಸಂಗ್ರಹಿಸಲಾದ ಶುಲ್ಕಗಳು ಮತ್ತು ಸಾರ್ವಜನಿಕ ನಿಧಿಗಳನ್ನು ಖಾಸಗಿ ಉದ್ದೇಶಕ್ಕಾಗಿ ಬಳಸಲಾಗಿದೆ ಎಂದು ಈಡಿ ನ್ಯಾಯಾಲಯಕ್ಕೆ ತಿಳಿಸಿತ್ತು.
ಸಿದ್ದೀಕಿಯ ಬಂಧನದ ದಿನ ದಿಲ್ಲಿ-ಎನ್‌ಸಿಆರ್‌ನ 19 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿದ್ದ ಈಡಿ 48 ಲ.ರೂ.ನಗದು ಹಣವನ್ನು ವಶಪಡಿಸಿಕೊಂಡಿತ್ತು.
ನ.10ರಂದು ದಿಲ್ಲಿಯ ಕೆಂಪುಕೋಟೆ ಬಳಿ ಸಂಭವಿಸಿದ್ದ ಸ್ಫೋಟದ ತನಿಖೆ ನಡೆಸುತ್ತಿರುವ ಎನ್‌ಐಎ ,ಅಲ್ ಫಲಾಹ್ ವಿವಿಯು 'ವೈಟ್ ಕಾಲರ್' ಭಯೋತ್ಪಾದಕ ಜಾಲದೊಂದಿಗೆ ಸಂಬಂಧ ಹೊಂದಿದೆ ಎಂದು ಆರೋಪಿಸಿದೆ.




