ಮಂಜೇಶ್ವರ: ಶೈಕ್ಷಣಿಕ ಕ್ಷೇತ್ರದಲ್ಲಿ ವಿವಿಧ ರೀತಿಯ ಚಟುವಟಿಕೆಗಳಲ್ಲಿ ಗಮನ ಸೆಳೆಯುತ್ತಿರುವ ಪೀಸ್ ಕ್ರಿಯೇಟಿವ್ ಕುಂಜತ್ತೂರು ಹಾಗೂ ಹೊಸಂಗಡಿ ಶಾಲೆಗಳ ವಿದ್ಯಾರ್ಥಿಗಳು ಚಿಕ್ಕಮಗಳೂರಿನ ಡಿವೈಇಎಸ್ ಇಂಡೋರ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಕೇಲೋ ಇಂಡಿಯಾ ಅಸ್ಮಿತಾ ಪೆನ್ಚಕ್ ಸಿಲಾಟ್ ಲೀಗ್ 2025-26 ಕರಾಟೆ ಸ್ಪರ್ಧೆಯಲ್ಲಿ ಗಮನಾರ್ಹ ಪ್ರದರ್ಶನದಿಂದ ರಾಜ್ಯ ಮಟ್ಟದಲ್ಲಿ ಕೀರ್ತಿ ತುಂಬಿ ಮತ್ತೊಮ್ಮೆ ಸದ್ದಿಲ್ಲದೆ ಸುದ್ದಿಯಾಗಿದ್ದಾರೆ.
ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಶಾಲೆಯಿಂದ ಒಟ್ಟು 13 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದು, ಅದರಲ್ಲಿ 6 ಚಿನ್ನ, 3 ಬೆಳ್ಳಿ ಹಾಗೂ 1 ಕಂಚು ಪದಕಗಳನ್ನು ಕೈಸೇರಿಸಿಕೊಂಡು ಶಾಲೆಯ ಸಾಧನೆಯನ್ನು ಮತ್ತಷ್ಟು ಎತ್ತರಕ್ಕೆ ತಂದು ನಿಲ್ಲಿಸಿದ್ದಾರೆ. ವಿದ್ಯಾರ್ಥಿಗಳ ಈ ಭರ್ಜರಿ ಯಶಸ್ಸಿನ ಹಿಂದೆ ಶಾಲಾ ಆಡಳಿತ ಸಮಿತಿಯ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಿದ ಕೋಚ್‍ಗಳ ಸಮರ್ಪಿತ ತರಬೇತಿ ಮತ್ತು ತಾತ್ವಿಕ ಮಾರ್ಗದರ್ಶನ ಪ್ರಮುಖ ಪಾತ್ರವಹಿಸಿದೆ. ನಿರಂತರ ಪರಿಶ್ರಮ, ಶಿಸ್ತಿನ ಅಭ್ಯಾಸ ಮತ್ತು ಕ್ರೀಡಾಳುಗಳ ಮನೋಬಲವು ಈ ಸಾಧನೆಯನ್ನು ಸಾಧ್ಯವನ್ನಾಗಿಸಿದೆ.
ವಿದ್ಯಾರ್ಥಿಗಳ ಅದ್ಭುತ ಸಾಧನೆಗೆ ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ರಹ್ಮಾನ್ ಅರಿಮಲ ಹಾಗೂ ಪ್ರಾಂಶುಪಾಲ ಅಬ್ದುಲ್ ಖಾದರ್ ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಯಶಸ್ಸುಗಳಿಸುವಂತೆ ಶುಭವನ್ನು ಹಾರೈಸಿದ್ದಾರೆ.
ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ನಡೆದ ಕರಾಟೆ ಚಾಂಪ್ಯನ್ ಶಿಪ್ ನಲ್ಲೂ ಪೀಸ್ ಕ್ರಿಯೇಟಿವ್ ಶಾಲಾ ವಿದ್ಯಾರ್ಥಿಗಳುಸಾಧನೆಗೈದಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.




.jpg)
