ಕಾಸರಗೋಡು: ಕೇರಳದಲ್ಲಿ ನಡೆಯಲಿರುವ ಸ್ಥಳೀಯಾಡಳಿತ ಚುನಾವಣೆಯೊಂದಿಗೆ ರಾಜ್ಯದ ಸಮಸ್ತ ಜನತೆ ಬಿಜೆಪಿ ಜತೆ ಕೈಜೋಡಿಸಲಿದ್ದಾರೆ ಎಂದು ಪಕ್ಷದ ರಾಷ್ಟ್ರೀಯ ನಿರ್ವಾಹಕ ಸಮಿತಿ ಸದಸ್ಯ ಸಿ. ಕೆ. ಪದ್ಮನಾಭನ್ ಹೇಳಿದರು.
ಅವರು ಬಿಜೆಪಿ ಕಾಸರಗೋಡು ಜಿಲ್ಲಾ ಸಸಮಿತ ಕಚೇರಿ ಸಭಾಂಗಣದಲ್ಲಿ ಬಿಜೆಪಿ ಕಾಸರಗೋಡು ನಗರಸಭಾ ಚುನಾವಣಾ ಸಮಾವೇಶ ಹಾಗೂ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಬಿಜೆಪಿ ಪಕ್ಷ ಮತ್ತು ಪಕ್ಷದ ಆಳ್ವಿಕೆಯಲ್ಲಿರುವ ಉತ್ತರದ ರಾಜ್ಯಗಳ ಬಗ್ಗೆ ಸುಳ್ಳು ಪ್ರಚಾರ ನಡೆಸಿ ಮತ ಗಿಟ್ಟಿಸುವ ಪ್ರತಿಪಕ್ಷ ಐಕ್ಯರಂಗ-ಎಡರಂಗದ ಕುತಂತ್ರ ಇನ್ನು ಫಲಿಸದು. ಕೇರಳದ ಮತದಾರರು ಪ್ರಬುದ್ಧರಾಗಿದ್ದು ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಚೆನ್ನಾಗಿ ಅರಿತಿರುವುದಾಗಿ ತಿಳಿಸಿದರು.
ಈ ಸಂದರ್ಭ ಕಾಸರಗೋಡು ನಗರಸಭೆಯ ಬಿಜೆಪಿ ಪ್ರಣಾಳಿಕೆ ವಿಷನ್ -2030'ನ್ನು ಸಿ.ಕೆಪದ್ಮನಾಭನ್ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಮುನ್ಸಿಪಲ್ ಈಸ್ಟ್ ಏರಿಯ ಅಧ್ಯಕ್ಷ ವರಪ್ರಸಾದ್ ಕೋಟೆಕಣಿ ಅಧ್ಯಕ್ಷತೆ ವಹಿಸಿದರು.
ಬಿಜೆಪಿ ಕೇರಳ ಸೆಲ್ ಕೋರ್ಡಿನೇಟರ್ ವಿ. ಕೆ. ಸಜೀವನ್, ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ, ಜಿಲ್ಲಾ ಪ್ರ. ಕಾರ್ಯದರ್ಶಿ ಪಿ. ಆರ್. ಸುನಿಲ್, ಉಪಾಧ್ಯಕ್ಷ ಪಿ. ರಮೇಶ್, ಮಂಡಲ ಸಮಿತಿ ಅಧ್ಯಕ್ಷ ಗುರು ಪ್ರಸಾದ ಪ್ರಭು, ಮುನ್ಸಿಪಲಾ ವೆಸ್ಟ್ ಏರಿಯ ಪ್ರ. ಕಾರ್ಯದರ್ಶಿ ದಯಾನಂದ ಪೂಜಾರಿ ಉಪಸ್ಥಿತರಿದ್ದರು.





