ನವದೆಹಲಿ: ವಿಮಾನಗಳ ಹಾರಾಟ ರದ್ದತಿ ಹಾಗೂ ಪ್ರಯಾಣಿಕರ ಆಕ್ರೋಶಕ್ಕೆ ತುತ್ತಾಗಿ ವ್ಯಾಪಕ ಟೀಕೆಗೆ ಗುರಿಯಾಗಿರುವ ಇಂಡಿಗೊ ವಿಮಾನಸಂಸ್ಥೆಯು ಪ್ರಯಾಣಿಕರಿಗೆ ಈವರೆಗೆ ₹610 ಕೋಟಿ ಮರುಪಾವತಿ ಮಾಡುವುದಕ್ಕೆ ಕ್ರಮ ಕೈಗೊಂಡಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಭಾನುವಾರ ಹೇಳಿದೆ.
ಶನಿವಾರಕ್ಕೆ ಅಂತ್ಯಗೊಂಡ ಅವಧಿಗೆ, 3 ಸಾವಿರದಷ್ಟು ಸಾಮಾನು ಸರಂಜಾಮುಗಳನ್ನು ಪ್ರಯಾಣಿಕರಿಗೆ ತಲುಪಿಸಿದೆ. ಜೊತೆಗೆ, ವಿಮಾನಗಳ ಸಂಚಾರವೂ ನಿಧಾನಕ್ಕೆ ಸಹಜ ಸ್ಥಿತಿಯತ್ತ ಮರಳುತ್ತಿದೆ ಎಂದು ತಿಳಿಸಿದೆ.
ವಿಮಾನಗಳ ಸಂಚಾರ ರದ್ದಾಗಿದ್ದಲ್ಲಿ ಅಥವಾ ವಿಪರೀತ ವಿಳಂಬವಾಗಿದ್ದ ಸಂದರ್ಭದಲ್ಲಿ, ಪ್ರಯಾಣಿಕರಿಗೆ ಭಾನುವಾರ ರಾತ್ರಿ 8ರ ಒಳಗಾಗಿ ಹಣ ಮರುಪಾವತಿ ಮಾಡುವಂತೆ ಸೂಚನೆ ನೀಡಲಾಗಿತ್ತು ಎಂದು ಸಚಿವಾಲಯ ತಿಳಿಸಿದೆ.
ವಿಮಾನಗಳ ಸಂಚಾರ ರದ್ದಾದ ಬಳಿಕ ವಿವಿಧ ವಿಮಾನ ನಿಲ್ದಾಣಗಳಲ್ಲಿ ಗದ್ದಲ, ಗೊಂದಲ ಉಂಟಾಗಿತ್ತು. ಈ ವೇಳೆ, ಲಗೇಜುಗಳು ಪ್ರತ್ಯೇಕಗೊಂಡಿದ್ದರಿಂದ ಪ್ರಯಾಣಿಕರು ಪರದಾಡಿದ್ದರು. ಇಂತಹ ಲಗೇಜುಗಳನ್ನು ಪತ್ತೆ ಹಚ್ಚಿ, 48 ಗಂಟೆಗಳ ಒಳಗಾಗಿ ಆಯಾ ಪ್ರಯಾಣಿಕರಿಗೆ ತಲುಪಿಸುವಂತೆ ಸಚಿವಾಲಯವು ಇಂಡಿಗೊ ಸಂಸ್ಥೆಗೆ ನಿರ್ದೇಶನ ನೀಡಿತ್ತು.
'ವಿಮಾನ ನಿಲ್ದಾಣಗಳ ಟರ್ಮಿನಲ್‌ಗಳಲ್ಲಿ ಸಹಜಸ್ಥಿತಿ ಕಂಡುಬಂದಿದೆ. ಪ್ರಯಾಣಿಕರ ಚೆಕ್‌ಇನ್, ಭದ್ರತೆ ಹಾಗೂ ಬೋರ್ಡಿಂಗ್ ಪ್ರಕ್ರಿಯೆಗಳು ಕೂಡ ಸುಲಲಿತವಾಗಿ ನಡೆಯುತ್ತಿದ್ದು, ಯಾವುದೇ ದಟ್ಟಣೆ ಕಂಡುಬಂದಿಲ್ಲ ಎಂದು ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್, ಅಹಮದಾಬಾದ್ ಹಾಗೂ ಗೋವಾ ವಿಮಾನ ನಿಲ್ದಾಣಗಳ ನಿರ್ದೇಶಕರು ಖಚಿತಪಡಿಸಿದ್ದಾರೆ' ಎಂದೂ ಸಚಿವಾಲಯ ತಿಳಿಸಿದೆ.
ಶುಕ್ರವಾರ, ಇಂಡಿಗೊ ಸಂಸ್ಥೆಯ 706 ವಿಮಾನಗಳು ಕಾರ್ಯಾಚರಿಸಿದ್ದವು. ಇವುಗಳ ಸಂಖ್ಯೆ ಶನಿವಾರ 1,565ಕ್ಕೆ ಏರಿಕೆಯಾಗಿತ್ತು. ಭಾನುವಾರ 1,650 ವಿಮಾನಗಳ ಸಂಚಾರಕ್ಕೆ ಸಂಸ್ಥೆ ಕ್ರಮ ಕೈಗೊಂಡಿತ್ತು. ಇತರ ದೇಶೀಯ ವಿಮಾನಸಂಸ್ಥೆಗಳು ಯಾವುದೇ ತೊಂದರೆ ಇಲ್ಲದೆ ಕಾರ್ಯಾಚರಣೆ ಮಾಡುತ್ತಿವೆ ಎಂದು ಹೇಳಿದೆ.
ಪ್ರಯಾಣ ಮರುನಿಗದಿಗೆ ಹೆಚ್ಚುವರಿ ಶುಲ್ಕ ವಿಧಿಸುವಂತಿಲ್ಲ: ಸೂಚನೆ ಮರುಪಾವತಿ, ರಿಬುಕಿಂಗ್‌ಗೆ ನೆರವು: ಪ್ರತ್ಯೇಕ ಕೌಂಟರ್ ಸ್ಥಾಪನೆ
'ಸಾಮಾನ್ಯ ಸ್ಥಿತಿಯತ್ತ ಕಾರ್ಯಾಚರಣೆ'
ನವದೆಹಲಿ: 'ವಿಮಾನಗಳ ಸಂಚಾರವನ್ನು ಹಂತಹಂತವಾಗಿ ಸಾಮಾನ್ಯ ಸ್ಥಿತಿಗೆ ತರಲು ಕ್ರಮಕೈಗೊಂಡಿದ್ದೇವೆ. ಭಾನುವಾರ ಅಂದಾಜು 1650 ವಿಮಾನಗಳು ಕಾರ್ಯಾಚರಿಸಿವೆ' ಎಂದು ಇಂಡಿಗೊ ಸಿಇಒ ಪೀಟರ್ ಎಲ್ಬರ್ಸ್ ಭಾನುವಾರ ಹೇಳಿದ್ದಾರೆ. ಈ ಕುರಿತು ಸಂಸ್ಥೆಯ ಸಿಬ್ಬಂದಿಗೆ ವಿಡಿಯೊ ಸಂದೇಶ ಕಳುಹಿಸಿರುವ ಅವರು ಭಾನುವಾರದಂದು ಸಂಸ್ಥೆಯ 'ಆನ್ ಟೈಮ್ ಪರ್‌ಫಾರ್ಮನ್ಸ್' (ಒಟಿಪಿ) ಶೇ 75ರಷ್ಟಾಗುವ ನಿರೀಕ್ಷೆ ಹೊಂದಿದ್ದಾಗಿ ತಿಳಿಸಿದ್ದಾರೆ. 'ಯಾವುದೇ ವಿಮಾನಗಳ ಸಂಚಾರವನ್ನು ರದ್ದುಗೊಳಿಸುವ ಉದ್ದೇಶವಿದ್ದಲ್ಲಿ ಈ ಕುರಿತು ಮುಂಚಿತವಾಗಿಯೇ ಮಾಹಿತಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಜಮಾಯಿಸಿ ಗದ್ದಲ ಉಂಟಾಗುವುದನ್ನು ತಪ್ಪಿಸಬಹುದಾಗಿದೆ' ಎಂದೂ ಹೇಳಿದ್ದಾರೆ. 138 ನಗರಗಳ ಪೈಕಿ 137 ನಗರಗಳಿಗೆ ಭಾನುವಾರ ವಿಮಾನಗಳು ಸಂಚರಿಸಿವೆ ಎಂದು ಇಂಡಿಗೊ ತಿಳಿಸಿದೆ.
'ಡಿ.10ರ ವೇಳೆಗೆ ಸ್ಥಿರತೆ'
'ಸಂಸ್ಥೆಯ ವಿಮಾನಗಳ ಹಾರಾಟದಲ್ಲಿ ಡಿಸೆಂಬರ್ 10ರ ಒಳಗಾಗಿ ಸ್ಥಿರತೆ ಕಂಡುಬರುವ ನಿರೀಕ್ಷೆ ಇದೆ. ಈ ಮೊದಲು ಡಿ.10ರಿಂದ 15ರ ನಡುವೆ ಇದು ಕಾರ್ಯಗತಗೊಳ್ಳುವ ನಿರೀಕ್ಷೆ ಹೊಂದಲಾಗಿತ್ತು' ಎಂದು ಇಂಡಿಗೊ ತಿಳಿಸಿದೆ. ಸಂಸ್ಥೆ 2300 ವಿಮಾನಗಳನ್ನು ಹೊಂದಿದ್ದು ಈ ಪೈಕಿ ಭಾನುವಾರ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ಒಟ್ಟು 1650 ವಿಮಾನಗಳು ಕಾರ್ಯಾಚರಣೆ ನಡೆಸಿವೆ. 650 ವಿಮಾನಗಳ ಸಂಚಾರವನ್ನು ದಿನದ ಮಟ್ಟಿಗೆ ರದ್ದು ಮಾಡಲಾಗಿತ್ತು ಎಂದು ಇಂಡಿಗೊ ತಿಳಿಸಿದೆ.

