ಪಣಜಿ: ಉತ್ತರ ಗೋವಾದದಲ್ಲಿರುವ ನೈಟ್ ಕ್ಲಬ್ 'ಬರ್ಚ್ ಬೈ ರೋಮಿಯೊ ಲೇನ್'ನಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಬೆಂಕಿ ದುರಂತಕ್ಕೆ ಸಂಬಂಧಿಸಿ ನೈಟ್ ಕ್ಲಬ್‌ನ ಜನರಲ್ ಮ್ಯಾನೇಜರ್ ಸೇರಿದಂತೆ ನಾಲ್ವರು ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದ್ದು, ಒಂದು ವಾರದೊಳಗೆ ತನ್ನ ವರದಿಯನ್ನು ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ ಎಂದೂ ಸಾವಂತ್ ಹೇಳಿದ್ದಾರೆ.
ಗೋವಾ ರಾಜಧಾನಿ ಪಣಜಿಯಿಂದ 25 ಕಿ.ಮೀ ದೂರದಲ್ಲಿರುವ ಅರ್ಪೋರಾ ಗ್ರಾಮದಲ್ಲಿರುವ ನೈಟ್‌ಕ್ಲಬ್ 'ಬರ್ಚ್ ಬೈ ರೋಮಿಯೊ ಲೇನ್'ನಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಭಾರಿ ಅಗ್ನಿ ಅವಘಡದಲ್ಲಿ 25 ಮಂದಿ ಸಜೀವ ದಹನವಾಗಿದ್ದು, ಆರು ಜನರು ಗಾಯಗೊಂಡಿದ್ದಾರೆ.
ಮೃತರಲ್ಲಿ ನಾಲ್ವರು ವಿದೇಶಿ ಪ್ರವಾಸಿಗರು, 14 ಮಂದಿ ಕ್ಲಬ್‌ನ ಸಿಬ್ಬಂದಿ ಸೇರಿದ್ದಾರೆ. ಇತರ ಏಳು ಜನರ ಗುರುತು ಪತ್ತೆಯಾಗಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ನೈಟ್ ಕ್ಲಬ್ ಮಾಲೀಕರಾದ ಸೌರಭ್ ಲೂಥ್ರಾ ಹಾಗೂ ಗೌರವ್ ಲೂಥ್ರಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

