ಬಹರಂಪುರ: ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ನಲ್ಲಿ 'ಬಾಬರಿ ಮಸೀದಿ ಶೈಲಿ'ಯ ಮಸೀದಿಯೊಂದರ ನಿರ್ಮಾಣಕ್ಕೆ ಶಾಸಕ ಹುಮಾಯೂನ್ ಕಬೀರ್ ಶಂಕುಸ್ಥಾಪನೆ ನೆರವೇರಿಸಿದ್ದು, ಯೋಜನೆಯು ಆಡಳಿತಾರೂಢ ಟಿಎಂಸಿ ಹಾಗೂ ಬಿಜೆಪಿ ನಡುವೆ ಜಟಾಪಟಿಗೆ ಕಾರಣವಾಗಿದೆ.
'ಮುಸ್ಲಿಮರ ಧ್ರುವೀಕರಣಕ್ಕೆ ಪಕ್ಷದ ಶಾಸಕನನ್ನು ಟಿಎಂಸಿ ಬಳಸಿಕೊಳ್ಳುತ್ತಿದೆ' ಎಂದು ಬಿಜೆಪಿ ಟೀಕಿಸಿದೆ.
ಬಿಜೆಪಿಯ ಆರೋಪಗಳು ಆಧಾರರಹಿತ ಎಂದು ಟಿಎಂಸಿ ತಿರುಗೇಟು ನೀಡಿದೆ.
ಈ ವಿವಾದಾತ್ಮಕ ಯೋಜನೆ ಕಾರಣಕ್ಕೆ ಕಬೀರ್ ಅವರನ್ನು ಕಳೆದ ವಾರ ಟಿಎಂಸಿ ಪಕ್ಷದಿಂದ ಅಮಾನತು ಮಾಡಿದೆ.
ಈ ವಿಚಾರವಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಟೀಕಾಪ್ರಹಾರ ಮಾಡಿರುವ ಬಿಜೆಪಿ ನಾಯಕ ಅಮಿತ್ ಮಾಳವೀಯ, 'ಬಾಬರಿ ಮಸೀದಿ ಶೈಲಿಯ ಮಸೀದಿ ನಿರ್ಮಾಣಕ್ಕಾಗಿ ಕಬೀರ್ ಬೆಂಬಲಿಗರು ಇಟ್ಟಿಗೆಗಳನ್ನು ಹೊತ್ತೊಯ್ಯುತ್ತಿದ್ದರು. ಬೆಲ್ಡಾಂಗದಲ್ಲಿನ ಬೆಳವಣಿಗೆಗಳು ಆತಂಕ ಮೂಡಿಸುವಂತಿವೆ' ಎಂದು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಕೋಮು ವಿಚಾರವಾಗಿ ಬೆಲ್ಡಾಂಗ ಬಹಳ ಸೂಕ್ಷ್ಮ ಪ್ರದೇಶ. ಇಲ್ಲಿ ಭುಗಿಲೇಳುವ ಯಾವುದೇ ಘರ್ಷಣೆಯು ಪಶ್ಚಿಮ ಬಂಗಾಳದ ಜೀವನಾಡಿಯಂತಿರುವ ರಾಷ್ಟ್ರೀಯ ಹೆದ್ದಾರಿ 12ರಲ್ಲಿನ ಸಂಚಾರಕ್ಕೆ ಧಕ್ಕೆ ತರಲಿದೆ' ಎಂದು ಮಾಳವೀಯ ಎಚ್ಚರಿಸಿದ್ದಾರೆ.
ರಾಜ್ಯದ ಉತ್ತರ ಮತ್ತು ದಕ್ಷಿಣ ಭಾಗವನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿ ಇದಾಗಿದ್ದು, ಇಲ್ಲಿ ಉದ್ಭವಿಸ
ಬಹುದಾದ ಕಾನೂನು-ಸುವ್ಯವಸ್ಥೆ ಸಮಸ್ಯೆಯು ರಾಷ್ಟ್ರೀಯ ಭದ್ರತೆ ಮೇಲೂ ಗಂಭೀರ ಪರಿಣಾಮ ಬೀರಬಹುದು' ಎಂದು ಹೇಳಿದ್ದಾರೆ.
'ಮುಂಬರುವ ವಿಧಾನಸಭಾ ಚುನಾವಣೆ ಹೊತ್ತಿನಲ್ಲಿ ರಾಜ್ಯದಲ್ಲಿ ಕ್ಷೋಭೆಯನ್ನುಂಟು ಮಾಡುವುದಕ್ಕೆ ಟಿಎಂಸಿ ಶಾಸಕ ಹುಮಾಯೂನ್ ಕಬೀರ್ ಅವರನ್ನು ಬಳಸಿಕೊಳ್ಳುತ್ತಿದೆ' ಎಂದು ಬಿಜೆಪಿಯ ಹಿರಿಯ ನಾಯಕ ದಿಲೀಪ್ ಘೋಷ್ ಆರೋಪಿಸಿದ್ದಾರೆ.
'ಬಿಜೆಪಿ ಹಾಗೂ ಆರ್‌ಎಸ್ ಎಸ್‌ನೊಂದಿಗೆ ಕಬೀರ್ ಅಘೋಷಿತ ಒಪ್ಪಂದ ಮಾಡಿಕೊಂಡಿದ್ದು, ಜಿಲ್ಲೆಯಲ್ಲಿ ಶಾಂತಿ ಕದಡಲು ಕಬೀರ್ ಹವಣಿಸುತ್ತಿದ್ದಾರೆ' ಎಂದು ಟಿಎಂಸಿ ಅರೋಪಿಸಿದೆ.
'ಅಮಾನತು ಮಾಡಲಾಗಿರುವ ಶಾಸಕ ಕಬೀರ್‌ಗೆ ಬಿಜೆಪಿಯಿಂದ ಧನಸಹಾಯ ಸಿಗುತ್ತಿದೆ. ಗಲಭೆ ಭುಗಿಲೇ
ಳುವಂತೆ ಮಾಡುವುದಕ್ಕೆ ಆತ ಬಿಜೆಪಿಯ ಏಜೆಂಟ್‌ನಂತೆ ಕೆಲಸ ಮಾಡುತ್ತಿದ್ದಾರೆ' ಎಂದು ಟಿಎಂಸಿಯ ಹಿರಿಯ ನಾಯಕರೊಬ್ಬರು ಆರೋಪಿಸಿದ್ದಾರೆ.




