ನವದೆಹಲಿ: ವಿಮಾನ ಕಾರ್ಯಾಚರಣೆಯಲ್ಲಿ ಉಂಟಾದ ವ್ಯತ್ಯಯದ ಬಗ್ಗೆ 24 ಗಂಟೆಯೊಳಗೆ ವಿವರಣೆ ನೀಡಿ ಎಂದು ಇಂಡಿಗೊ ಸಿಇಒ ಪೀಟರ್ ಎಲ್ಬರ್ಸ್ ಹಾಗೂ ವ್ಯವಸ್ಥಾಪಕ (ಹೊಣೆಗಾರ) ಈಸೀತ್‌ರೆ ಪೊರ್‌ಖೆರಸ್ ಅವರಿಗೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಸತತ ಐದು ದಿನಗಳಿಂದ ಇಂಡಿಗೊದ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗಿದ್ದು, ಸಾವಿರಾರು ವಿಮಾನ ಸಂಚಾರ ರದ್ದುಗೊಂಡಿವೆ. ಲಕ್ಷಾಂತರ ಪ್ರಯಾಣಿಕರು ಪರದಾಡಿದ್ದರು.
ಭಾರಿ ಪ್ರಮಾಣದ ಕಾರ್ಯಾಚರಣೆ ವೈಫಲ್ಯವು ಯೋಜನೆ, ಮೇಲ್ವಿಚಾರಣೆ ಮತ್ತು ಸಂಪನ್ಮೂಲ ನಿರ್ವಹಣೆಯಲ್ಲಿ ಗಮನಾರ್ಹ ಲೋಪ ಉಂಟಾಗಿದೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.
'…ಸಿಇಒ ಆಗಿ ಸಂಸ್ಥೆಯನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುವುದು ನಿಮ್ಮ ಜವಾಬ್ದಾರಿ. ಆದರೆ ವಿಶ್ವಾಸಾರ್ಹವಾಗಿ ಕಾರ್ಯಾಚರಣೆ ನಡೆಸಲು ಮತ್ತು ಪ್ರಯಾಣಿಕರಿಗೆ ಅಗತ್ಯವಾದ ಸೌಲಭ್ಯಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ನಿಮ್ಮ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿದ್ದೀರಿ' ಎಂದು ಎಲ್ಬರ್ಸ್‌ಗೆ ಕಳುಹಿಸಲಾದ ನೋಟಿಸ್‌ನಲ್ಲಿ ಡಿಜಿಸಿಎ ತಿಳಿಸಿದೆ.
ವಿಮಾನಯಾನ ಸಂಸ್ಥೆಗೆ ಅನುಮೋದಿತ ಎಫ್‌ಡಿಟಿಎಲ್ (ವಿಮಾನ ಕರ್ತವ್ಯ ಸಮಯ ಮಿತಿಗಳು) ಯೋಜನೆಯ ಸುಗಮ ಅನುಷ್ಠಾನಕ್ಕಾಗಿ ಸಾಕಷ್ಟು ವ್ಯವಸ್ಥೆಗಳನ್ನು ಒದಗಿಸದಿರುವುದು ವಿಮಾನಗಳ ವ್ಯತ್ಯಯಕ್ಕೆ ಪ್ರಾಥಮಿಕ ಕಾರಣ ಎಂದು ನೋಟಿಸ್‌ಗಳಲ್ಲಿ ಉಲ್ಲೇಖಿಸಲಾಗಿದೆ.
ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಹಾಗೂ ಸಚಿವಾಲಯದ ಹಿರಿಯ ಅಧಿಕಾರಿಗಳು ಎಲ್ಬರ್ಸ್ ಅವರೊಂದಿಗೆ ಶನಿವಾರ 'ಗಂಭೀರ ಸಭೆ' ನಡೆಸಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತನಿಖಾ ಸಮಿತಿಯ ವರದಿಯನ್ವಯ ಘಟನೆಯ ಬಗ್ಗೆ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಅಧಿಕಾರಿ ಹೇಳಿದ್ದಾರೆ.




