ನವದೆಹಲಿ: 'ದೇಶದ ಸಂವಿಧಾನದ ಪೀಠಿಕೆಯಲ್ಲಿ 'ಜಾತ್ಯತೀತ', 'ಸಮಾಜವಾದ' ಪದಗಳ ಅಗತ್ಯವಿಲ್ಲ. ತುರ್ತು ಪರಿಸ್ಥಿತಿ ವೇಳೆ ಪ್ರಜಾಪ್ರಭುತ್ವ ವಿರೋಧಿ ನೀತಿ ವಿಧಾನದ ಅಡಿಯಲ್ಲಿ ಅವುಗಳನ್ನು ಸೇರಿಸಿದ್ದು, ಅವುಗಳನ್ನು ತೆಗೆದು ಹಾಕಬೇಕು' ಎಂದು ಬಿಜೆಪಿಯ ರಾಜ್ಯಸಭಾ ಸಂಸದ ಭೀಮ್ ಸಿಂಗ್ ಅವರು ಖಾಸಗಿ ಮಸೂದೆ ಮಂಡಿಸಿದ್ದಾರೆ.
ಸಿಂಗ್ ಅವರು 'ಸಂವಿಧಾನ (ತಿದ್ದುಪಡಿ) ಕಾಯ್ದೆ 2025' ಅನ್ನು ರಾಜ್ಯಸಭೆಯಲ್ಲಿ ಶುಕ್ರವಾರ ಮಂಡಿಸಿದ್ದು, ಮೂಲ ಸಂವಿಧಾನದಲ್ಲಿ ಈ ಪದಗಳು ಇರಲಿಲ್ಲ. ಇದರಿಂದ ಗೊಂದಲ ಸೃಷ್ಟಿಸುತ್ತಿವೆ ಎಂದು ತಿಳಿಸಿದ್ದಾರೆ.
'ಸಂವಿಧಾನದ ಪೀಠಿಕೆಯಿಂದ ಸಮಾಜವಾದ, ಜಾತ್ಯತೀತ ಪದಗಳನ್ನು ತೆಗೆದುಹಾಕಬೇಕು ಎಂದು ಖಾಸಗಿ ಮಸೂದೆಯನ್ನು ಮಂಡಿಸಿದ್ದೇನೆ. 1949ರಲ್ಲಿ ಮೂಲ ಸಂವಿಧಾನವನ್ನು ಅಂಗೀಕರಿಸಿದ್ದು, 1950ರಲ್ಲಿ ಜಾರಿಗೆ ಬಂದಿತ್ತು. ಈ ಸಂವಿಧಾನದಲ್ಲಿ ಈ ಪದಗಳು ಇಲ್ಲ. 1976ರ ತುರ್ತು ಪರಿಸ್ಥಿತಿಯ ವೇಳೆ ಸಂವಿಧಾನಕ್ಕೆ 42ನೇ ತಿದ್ದುಪಡಿ ತಂದು ಇಂದಿರಾ ಗಾಂಧಿ ಅವರು ಈ ಪದಗಳನ್ನು ಸೇರಿಸಿದರು. ಆ ವೇಳೆ ಈ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯೇ ನಡೆದಿರಲಿಲ್ಲ' ಎಂದು ಸಿಂಗ್ ಹೇಳಿದ್ದಾರೆ.




