ಕಾಸರಗೋಡು: ಕೇರಳ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯ ಮೊದಲ ಹಂತದ ಮತದಾನ ಡಿ. 9ರಂದು ನಡೆಯಲಿದ್ದು, ಏಳು ಜಿಲ್ಲೆಗಳ1.32ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ತಿರುವನಂತಪುರ, ಕೊಲ್ಲಂ, ಆಲಪ್ಪುಳ, ಪತ್ತನಂತಿಟ್ಟ, ಕೋಟ್ಟಾಯಂ, ಇಡುಕ್ಕಿ ಹಾಗೂ ಎರ್ನಾಕುಳಂ ಜಿಲ್ಲೆಗಳ ಒಟ್ಟು 595ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ.
ಇದರಲ್ಲಿ 471ಗ್ರಾಮ ಪಂಚಾಯಿತಿಗಳ8310 ವಾರ್ಡುಗಳು, 75ಬ್ಲಾಕ್ ಪಂಚಾಯಿತಿಗಳ 1090ವಾರ್ಡುಗಳು, ಏಳು ಜಿಲ್ಲಾ ಪಂಚಾಯಿತಿಗಳ 164 ವಾರ್ಡುಗಳು, 39ನಗರಸಭೆಗಳ 1371 ವಾರ್ಡುಗಳು ಹಗೂ ಮೂರುಮಹಾನಗರಪಾಲಿಕೆಗಳ 233ವಾರ್ಡುಗಳಿಗೆ ಈ ಚುನವಣೆ ನಡೆಯಲಿದೆ. ಈ ಏಳು ಜಿಲ್ಲೆಗಳಲ್ಲಿ ಭಾನುವಾರ ಸಂಜೆ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಭಾನುವಾರ ಸಂಜೆಯಿಂದ ಮನೆಗಳಿಗೆ ತೆರಳಿ ಪ್ರಚಾರಕಾರ್ಯ ನಡೆಯುತ್ತಿದೆ.
ಎರಡನೇ ಹಂತದಲ್ಲಿ ಡಿ. 11ರಂದು ತ್ರಿಸ್ತರ ಪಂಚಾಯಿತಿ ಚುನಾವಣೆ ನಡೆಯಲಿರುವ ಕಾಸರಗೋಡು ಸೇರಿದಂತೆ ಏಳು ಜಿಲ್ಲೆಗಳಲ್ಲಿ ಡಿ.9ರಂದುಸಂಜೆ 4ಕ್ಕೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಸಿಪಿಎಂ ನೇತೃತ್ವ ನೀಡುವ ಎಡರಂಗ, ಕಾಂಗ್ರೆಸ್ ನೇತೃತ್ವದ ಐಕ್ಯರಂಗ ಹಗೂ ಬಿಜೆಪಿ ನೇತೃತ್ವದ ಎನ್‍ಡಿಎ ಪ್ರಮುಖ ಇದಿರಾಳಿಗಳಾಗಿದ್ದಾರೆ. ಸಿಪಿಎಂ ಬೆಂಬಲಿಗರ ಹೆಸರು ಕೇಳಿಬರುತ್ತಿರುವ ಶಬರಿಮಲೆ ಚಿನ್ನಾಭರಣ ಕಳವು, ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟ್ಟತ್ತಿಲ್ ಆರೋಪಿಯಾಗಿರುವ ಲೈಂಗಿಕ ಹಗರಣ ಚುನಾವಣೆಯಲ್ಲಿ ಪ್ರಮುಖ ಚುನಾವಣಾ ಅಸ್ತ್ರವಾಗಿದ್ದು, ಬಿಜೆಪಿ ಈ ಎರಡೂ ಪಕ್ಷಗಳ ಪ್ರಕರಣವನ್ನು ಪ್ರಮುಖ ರಾಜಕೀಯ ಅಸ್ತ್ರವಾಗಿ ಎತ್ತಿಕೊಂಡು ಪ್ರಚಾರಕಾರ್ಯದಲ್ಲಿ ನಿರತವಾಗಿದೆ.

